ಸೋಮವಾರಪೇಟೆ, ಜ. ೨: ಕೊಡವ ಇತಿಹಾಸದ ಮೂಲ ಬೇರಾಗಿರುವ ಬಾಳೋಪಾಟ್‌ನ ಬಗ್ಗೆ ಪ್ರತಿ ಕೊಡವ ಭಾಷಿಕರೂ ಅರಿವು ಹೊಂದಿರಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮರಂದೋಡ ಕೊಡವ ಸಂಘದ ಸಂಯುಕ್ತ ಆಶ್ರಯದಲ್ಲಿ ಮರಂದೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಬಾಳೋಪಾಟ್ ಪೈಪೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡವ ಸಂಸ್ಕೃತಿಯಲ್ಲಿ ಬಾಳೋಪಾಟ್‌ಗೆ ವಿಶಿಷ್ಟವಾದ ಸ್ಥಾನವಿದೆ. ಕೊಡವ ಜನಾಂಗದಲ್ಲಿ ಹುಟ್ಟಿನಿಂದ ಸಾಯುವತನಕ ಇರುವ ಪದ್ಧತಿಯಲ್ಲಿ ಬಾಳೋಪಾಟ್ ವಿಶಿಷ್ಟವಾಗಿದೆ. ಇದರಲ್ಲಿ ಬರುವ ವರ್ಣನೆಯೇ ವಿಶೇಷವಾದುದು. ಹಾಡಿನ ವಿಷಯ, ರಾಗ,ಶೈಲಿ ಶಿಸ್ತು ಹಾಗೂ ಮೂಲಸ್ವರೂಪದ ಕಡೆ ಸ್ಪರ್ಧಿಗಳು ಗಮನ ಹರಿಸಬೇಕು ಎಂದರು.
ಅಕಾಡೆಮಿ ವತಿಯಿಂದ ಮುಂದಿನ ದಿನಗಳಲ್ಲಿ ಕೊಡವ ಭಾಷಿಕ ಮಕ್ಕಳಿಗೆ ಬಾಳೋಪಾಟ್ ತರಬೇತಿ ಕಾರ್ಯಾಗಾರ ಆಯೋಜಿಸ ಲಾಗುವುದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಚೋಯಮಾಡಂಡ ಭೀಮಯ್ಯ ಮಾತನಾಡಿ,ಕೊಡವ ಜಾನಪದೀಯ ಸಂಸ್ಕೃತಿಯಲ್ಲಿ ಬಾಳೋಪಾಟ್ ಹೆಚ್ಚು ಮಹತ್ವ ಪಡೆದಿದೆ. ಕೊಡವಾಮೆಯ ಮೂಲ ಬೇರು ಇರುವುದೇ ಬಾಳೋಪಾಟ್‌ನಲ್ಲಿ ಎಂದು ಹಿರಿಯರು ಹೇಳುತ್ತಾರೆ. ಕೊಡವ ಭಾಷೆಯ ಮೊದಲ ಜಾನಪದ ಗ್ರಂಥವಾದ ಪಟ್ಟೋಲೆ ಪಳಮೆಯಲ್ಲಿ ಬಾಳೋಪಾಟ್‌ನ ಉಲ್ಲೇಖವಿದೆ ಎಂದರು.
ವೇದಿಕೆಯಲ್ಲಿ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಮರಂದೋಡ ಕೊಡವ ಸಂಘದ ಅಧ್ಯಕ್ಷ ಅನ್ನಾಡಿಯಂಡ ದಿಲೀಪ್‌ಕುಮಾರ್, ಅಕಾಡೆಮಿ ರಿಜಿಸ್ಟಾçರ್ ಎ.ಸಿ.ಗಿರೀಶ್, ಸದಸ್ಯರಾದ ಕುಡಿಯರ ಮುತ್ತಪ್ಪ, ಬಬ್ಬೀರ ಸರಸ್ವತಿ, ಮಾಚಿಮಂಡ ಜಾನಕಿ, ಗೌರಮ್ಮ ಮಾದಮ್ಮಯ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭ ಚೋಯಮಾಡಂಡ ಭೀಮಯ್ಯ, ಕೋಲಿಂದಮಲೆ ತಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಪರೆಯಕಳಿ, ಕೊಡವ ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.