ಪಾಲಿಬೆಟ್ಟ, ಡಿ. ೩: ಕೊಡಗಿನಲ್ಲಿ ಸಹಕಾರ ಕ್ಷೇತ್ರ ಸುಭದ್ರವಾಗಿದೆ. ಒಂದೆರಡು ಸಂಘಗಳು ಹೊರತುಪಡಿಸಿದಂತೆ ಯಾವುದೇ ಸಂಘದಲ್ಲಿಯೂ ಅವ್ಯವಹಾರದ ದೂರುಗಳಿಲ್ಲ. ಕೊಡಗಿನಲ್ಲಿ ಸಹಕಾರ ಸಂಘಗಳು ಜನರ ವಿಶ್ವಾಸ ಗಳಿಸಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಶ್ಲಾಘಿಸಿದರು.
ಪಾಲಿಬೆಟ್ಟದಲ್ಲಿ ಆಯೋಜಿತ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸೋಮಶೇಖರ್, ಕೊಡಗಿನ ಸಹಕಾರ ಸಂಘಗಳು ಹೆಸರಿಗೆ ತಕ್ಕಂತೆ ಸಹಕಾರ ಸಂಘಗಳಾಗಿದ್ದು, ಎಲ್ಲಿಯೂ ಅಸಹಕಾರ ಸಂಘಗಳಾಗಿ ಕುಖ್ಯಾತಿ ಪಡೆದಿಲ್ಲ. ಸ್ಥಳೀಯ ಜನತೆಯ ಸಹಕಾರದಿಂದ ಪ್ರತಿಯೊಂದು ಸಹಕಾರ ಸಂಘಗಳೂ ಲಾಭದಲ್ಲಿವೆೆ. ಪ್ರಸ್ತುತ ರಾಜ್ಯದಲ್ಲಿನ ೫,೪೦೦ ಸಹಕಾರ ಸಂಘಗಳ ಪೈಕಿ ೩ ಸಾವಿರದಷ್ಟು ಸಂಘಗಳಿಗೆ ಸ್ವಂತ ಕಟ್ಟಡ ಇವೆ. ಕೊಡಗಿನಲ್ಲಿ ಬಹುತೇಕ ಸಂಘಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಂದೆರಡು ಸಂಘಗಳಲ್ಲಿ ನಡೆದಿರುವ ಅಪಾರ ಪ್ರಮಾಣದ ಆರ್ಥಿಕ ಲೂಟಿಯಿಂದಾಗಿ ಸಹಕಾರ ಸಂಸ್ಥೆಗಳ ಬಗ್ಗೆ ಜನತೆಯಲ್ಲಿ ನಂಬಿಕೆ, ವಿಶ್ವಾಸ ಕಡಿಮೆ ಆಗುವಂತಾಗಿದೆ. ಇಂತÀ ಪರಿಸ್ಥಿತಿ ಬರಬಾರದು ಎಂದು ಅಭಿಪ್ರಾಯಪಟ್ಟ ಸಹಕಾರ ಸಚಿವ ಸೋಮಶೇಖರ್, ಸಹಕಾರ ಸಂಘಗಳು ಗ್ರಾಹಕ ಸದಸ್ಯರ ನಂಬಿಕೆಗೆ ಬದ್ದವಾಗಿ ಕಾರ್ಯನಿರ್ವಹಿಸುವಂತೆ ಕಿವಿಮಾತು ಹೇಳಿದರು.
೧೦೦ ವರ್ಷ ಪೂರೈಸಿರುವ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘವು ಈ ಮೂಲಕ ಸುದೀರ್ಘ ಮತ್ತು ವಿಶ್ವಾಸಾರ್ಹ ಆಡಳಿತದ ಇತಿಹಾಸಕ್ಕೆ ಕಾರಣವಾಗಿದೆ. ಉತ್ತಮ ಕಾರ್ಯಚಟುವಟಿಕೆ ಮೂಲಕ ಈ ಸಂಘ ಶ್ಲಾಘನೆಗೆ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕಿ ವೀಣಾ ಅಚ್ಚಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ನೀಡಿದ ಮನವಿಯನ್ನು ಪರಿಶೀಲಿಸಿ ಕಂದಾಯ ಸಚಿವರಲ್ಲಿ ಈ ಬಗ್ಗೆ ಚರ್ಚಿಸಿ ಶೀಘ್ರವೇ ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ಸಚಿವ ಸೋಮಶೇಖರ್ ಭರವÀಸೆ ನೀಡಿದರು.
ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಭವನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪೂರ್ವಿಕರ ಶ್ರಮದ ಫಲವಾಗಿಯೇ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ ೧೦೦ ವರ್ಷ ಪೂರೈಸಿದೆ. ನೂತನ ಶಾಖೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸುವ ಬಗ್ಗೆಯೂ ಚಿಂತನೆಹರಿಸಿ ಎಂದು ಸಲಹೆ ನೀಡಿದರು.
(ಮೊದಲ ಪುಟದಿಂದ) ಸಹಕಾರ ಸಂಘಗಳು ಜನರ ದುಗುಡ ಪರಿಹಾರಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿವೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸಂಘದ ನೂತನದ್ವಾರ ಉದ್ಘಾಟಿಸಿ ಮಾತನಾಡಿ, ಅನೇಕರ ಪಾಲಿಗೆ ಆರ್ಥಿಕವಾಗಿ ಸಹಕಾರ ನೀಡುವಲ್ಲಿ ನಾಡಿನ ಸಹಕಾರಿ ವ್ಯವಸ್ಥೆ ಕಾರಣವಾಗಿವೆ. ರಾಜ್ಯದ ೧೪ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಶ್ಚಿಮಘಟ್ಟ ಶ್ರೇಣಿಯಿದ್ದು ಪರಿಸರ ಮಾಲಿನ್ಯ ತಡೆಗಟ್ಟಿ ಪರಿಸರ ರಕ್ಷಿಸಿ ಎಂಬ ಜಾಗೃತಿಯನ್ನು ನಾಡಿನ ಎಲ್ಲಾ ಕಡೆ ಮೂಡಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಸ್ವಂತ ಕಟ್ಟಡಗಳಿಲ್ಲದ ಗ್ರಾಮೀಣ ಪ್ರದೇಶದ ಅನೇಕ ಸಹಕಾರ ಸಂಘಗಳಿಗೆ ಸ್ವಂತಜಾಗ ಇದ್ದಲ್ಲಿ ಕಟ್ಟಡ ನಿರ್ಮಿಸಲು ಸಹಕಾರ ಇಲಾಖೆಯಿಂದ ಸೂಕ್ತ ಅನುದಾನ ನೀಡುವಂತೆ ಕೋರಿದರು. ಕೊಡಗಿನ ರೈತರು ಬೆಳೆದ ಭತ್ತದ ಖರೀದಿಗೆ ಖರೀದಿ ಕೇಂದ್ರಗಳಲ್ಲಿ ಆರ್.ಟಿ.ಸಿ ಕಡ್ಡಾಯಮಾಡಲಾಗಿದೆ. ಇದರಿಂದಾಗಿ ರೈತರಿಗೆ ತೀವ್ರ ಸಮಸ್ಯೆಯಾಗಿದೆ ಎಂದರಲ್ಲದೇ, ಕೊಡಗಿನವರಿಗೆ ಎರಡು ಕೋವಿಗಳಿದ್ದಲ್ಲಿ ಅಂಥವುಗಳ ಪೈಕಿ ಕೇವಲ ೧ ಕೋವಿಗೆ ಮಾತ್ರ ಜಿಲ್ಲಾಡಳಿತ ಪರವಾನಗಿ ನೀಡುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಸಚಿವರು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಕ್ತ ಆದೇಶ ನೀಡುವಂತೆ ಕೋರಿದರು.
ನೂತನ ಎಂ.ಎಲ್.ಸಿ. ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕಡು ಬಡವರಿಗೆ ಆರ್ಥಿಕ ಚೈತನ್ಯವನ್ನು ನಾಡಿನ ಸಹಕಾರ ಸಂಘಗಳು ನೀಡುತ್ತ ಬಂದಿವೆÉ. ಕೊಡಗಿನಲ್ಲಿ ಸಹಕಾರ ಸಂಘಗಳು ಭದ್ರಬುನಾದಿ ಹೊಂದಿದ್ದು, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಅಜಿತ್ ಕರುಂಬಯ್ಯ ಸಂಪಾದಕೀಯದಲ್ಲಿ ಮೂಡಿಬಂದ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸ್ಮರಣ ಸಂಚಿಕೆ ಶತ ಸಂಭ್ರಮವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿನ ೩೭೬ ಸಹಕಾರ ಸಂಘಗಳ ಪೈಕಿ ಪಾಲಿಬೆಟ್ಟ, ಕೊಡ್ಲಿಪೇಟೆ, ಸೋಮವಾರಪೇಟೆ, ಶಾಂತಳ್ಳಿ, ಗರ್ವಾಲೆ, ಕುಶಾಲನಗರ, ಮರಗೋಡು, ಮಕ್ಕಂದೂರು ಸೇರಿದಂತೆ ೯ ಸಹಕಾರ ಸಂಘಗಳು ಶತಮಾನೋತ್ಸವ ಸಂಭ್ರಮ ಕಂಡಿವೆÉ. ಈ ಪೈಕಿ ವೀರಾಜಪೇಟೆ ತಾಲೂಕಿನಲ್ಲಿ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ ಶತಮಾನೋತ್ಸವ ಸಂಭ್ರಮದಲ್ಲಿರುವ ತಾಲೂಕಿನ ಏಕೈಕ ಸಂಘವಾಗಿದೆ ಎಂದು ಹೆಮ್ಮೆಯಿಂದ ನುಡಿದರು. ೧೯೧೫ ರಲ್ಲಿ ಶಾಂತಳ್ಳಿಯಲ್ಲಿ ಭಾರತದ ಎರಡನೇ ಸಹಕಾರ ಸಂಘ ಪ್ರಾರಂಭವಾಯಿತು. ಈ ಮೂಲಕ ಕೊಡಗು ದೇಶದ ಸಹಕಾರ ಸಂಘಗಳಲ್ಲಿಯೇ ಮುಂಚೂಣಿಯಲ್ಲಿ ರುವಂತಾಯಿತು ಎಂದು ಸ್ಮರಿಸಿದ ಗಣಪತಿ, ಜಮ್ಮಾ ದಾಖಲಾತಿ ಸಮಸ್ಯೆಯಿಂದಾಗಿ ಕೊಡಗಿನ ಬಹುತೇಕ ರೈತರು ಸರ್ಕಾರದ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಕಾರ ಮತ್ತು ಉಸ್ತುವಾರಿ ಸಚಿವರು ದಾಖಲಾತಿ ಸಮಸ್ಯೆಯನ್ನು ಕಂದಾಯ ಸಚಿವರ ಗಮನಕ್ಕೆ ತಂದು ಬಗೆಹರಿಸುವಂತೆ ಮನವಿ ಮಾಡಿದರು. ಜಿಲ್ಲೆಯ ೧.೫೦ ಲಕ್ಷ ರೈತರು ಸಾಲ ಸೌಲಭ್ಯಕ್ಕೆ ಅರ್ಹರಾಗಿದ್ದರೂ ದಾಖಲಾತಿ ಸಮಸ್ಯೆಯಿಂದಾಗಿ ಸಾಲಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಗಮನ ಸೆಳೆದರು.
ಕೇಂದ್ರ ಸರ್ಕಾರ ಏನಾದರೂ ಹೊಸ ಸಹಕಾರ ನೀತಿ ಜಾರಿಗೆ ತಂದದ್ದೇ ಆದಲ್ಲಿ ಸಹಕಾರ ಸಂಘದಲ್ಲಿ ಡಿಪಾಸಿಟ್ ಸಂಗ್ರಹಕ್ಕೆ ಅವಕಾಶ ಇಲ್ಲದಾಗುತ್ತದೆ. ಹೀಗಾಗಿ ಇಂಥ ಅಪಾಯಕಾರಿ ನೀತಿಯನ್ನು ಜಾರಿಗೊಳಿಸಬಾರದು ಎಂದು ಬಾಂಡ್ ಗಣಪತಿ ಆಗ್ರಹಿಸಿದರು.
ಸಹಕಾರ ಸಂಘದ ಅಧ್ಯಕ್ಷ ಅಜ್ಜಿನಿಕಂಡ ಎಸ್. ಶ್ಯಾಂಚAದ್ರ ಮಾತನಾಡಿ, ಸಂಘ ನಡೆದು ಬಂದ ಹಾದಿ, ಪ್ರಸ್ತುತ ಸಂಘ ಸಾಧಿಸಿರುವ ಲಾಭದ ಬಗ್ಗೆ ಮಾಹಿತಿ ನೀಡಿದರು.
ಶತಮಾನೋತ್ಸವ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಮುರುವಂಡ ಎಂ.ಪೊನ್ನಪ್ಪ, ಕುಟ್ಟಂಡ ವಿ. ಕುಟ್ಟಪ್ಪ, ಮಾಳೇಟಿರ ಎಂ. ಕಾಳಪ್ಪ, ಕಾಡ್ಯಮಾಡ ಕಾರ್ಯಪ್ಪ, ಮೂಕೊಂಡ ವಿಜು ಸುಬ್ರಮಣಿ ಮತ್ತು ಹಾಲಿ ಅಧ್ಯಕ್ಷ ಶ್ಯಾಂಚAದ್ರ, ಉಪಾಧ್ಯಕ್ಷ ಕೊಲ್ಲೀರ ಜಿ. ಧರ್ಮಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಟ್ಟಂಡ ಶಶಿಕಲ ಅವರನ್ನು ಸನ್ಮಾನಿಸಲಾಯಿತು.
ಶ್ಯಾಂಚAದ್ರ ಸ್ವಾಗತಿಸಿ, ಕೊಲ್ಲೀರಜಿ. ಧರ್ಮಜ ವಂದಿಸಿ, ಮಾದೇಟಿರ ಬೆಳ್ಯಪ್ಪ, ಚೋಕಿರ ಅನಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಜೆ.ಕೆ.ಸುಭಾಷಿಣಿ, ಅನಿತಾ ಸುರೇಶ್, ಎಂ.ಎ. ಕವಿತಾ ಪ್ರಾರ್ಥಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೊಟ್ಟೆಂಗಡ ರಮೇಶ್, ಪಟ್ರಪಂಡ ರಘು ನಾಣಯ್ಯ, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್, ಇದ್ದರು. ಪಾಲಿಬೆಟ್ಟ ವ್ಯಾಪ್ತಿಯ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಸಂಘದ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ಪುತ್ತಂ ಪ್ರದೀಪ್