ಶನಿವಾರಸಂತೆ, ಜ. ೨: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ರಚಿಸಿದ ವಿಜ್ಞಾನ ಮಾದರಿಗಳು ಕ್ರಿಯಾಶೀಲತೆಯಿಂದ ಕೂಡಿವೆ. ಮಕ್ಕಳ ಮುಗ್ಧ ಮನಸ್ಸು ನೀರಿನಂತಿದ್ದು, ಯಾವ ಪಾತ್ರೆಗೆ ಹಾಕಿದರೂ, ಆ ಪಾತ್ರೆಯ ಆಕಾರವನ್ನೇ ತೋರುವುದು. ಮಾರ್ಗದರ್ಶನ ಮುಖ್ಯವಾಗಿದ್ದು, ಮಕ್ಕಳು ಹಿರಿಯರ ಮಾತು ಕೇಳುವುದಕ್ಕಿಂತಲೂ ಅವರನ್ನೇ ಅನುಸರಿಸುತ್ತಾರೆ ಎಂದು ಲೇಖಕಿ ಹಾಗೂ ಪತ್ರಕರ್ತೆ ಶ.ಗ. ನಯನತಾರಾ ಅಭಿಪ್ರಾಯಪಟ್ಟರು. ಪಟ್ಟಣದ ಬ್ರೆöÊಟ್ ಅಕಾಡೆಮಿ ಇಂಗ್ಲೀಷ್ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸೈನ್ಸ್ ಎಕ್ಸ್ಪೊ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ರೆöÊಟ್ ಅಕಾಡೆಮಿ ಕಾರ್ಯದರ್ಶಿ ಹೇಮಾ ಮಾತನಾಡಿ, ಪುಟ್ಟ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿ ಪ್ರೋತ್ಸಾಹಿಸಲಾಗಿದೆ. ಶಿಕ್ಷಕರ, ಪೋಷಕರ ಸಂಪೂರ್ಣ ಸಹಕಾರದಿಂದ ಮಕ್ಕಳು ಉತ್ತಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು ಎಂದರು.
ಶಿಕ್ಷಕ ಲಾಂಛನ್ ಕಾರೆಕರ್ ಮಾತನಾಡಿ, ಬದುಕಿನಲ್ಲಿ ವಿಜ್ಞಾನ ಮುಖ್ಯವಾಗಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ವಿಜ್ಞಾನದ ಬಗ್ಗೆ ಅರಿವು ಮೂಡಿಸಿಕೊಂಡು ಮಕ್ಕಳು ಮಾದರಿಗಳನ್ನು ಕ್ರಿಯಾತ್ಮಕವಾಗಿ ರಚಿಸಿದ್ದಾರೆ ಎಂದರು.
ಮುಖ್ಯ ಶಿಕ್ಷಕಿ ಚೈತ್ರಾ ಪ್ರಾಸ್ತಾವಿಕ ನುಡಿಯಾಡಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಪರಮೇಶ್, ನಿರ್ದೇಶಕಿ ಸೀತಮ್ಮ, ಶಿಕ್ಷಕಿಯರಾದ ಪವಿತ್ರಾ, ಸೌಮ್ಯಾ, ದಿವ್ಯಾ, ಭ್ರಮ್ಯಾ, ಕವನಾ, ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು. ಪವಿತ್ರಾ ನಿರೂಪಿಸಿದರು.