*ಸಿದ್ದಾಪುರ, ಜ. ೨: ಅಭ್ಯತ್‌ಮಂಗಲ, ಒಂಟಿಯAಗಡಿ ಯಿಂದ ವಾಲ್ನೂರು, ಅಮ್ಮಂಗಾಲ ದವರೆಗೆ ಇರುವ ಮಣ್ಣಿನ ನಾಲೆ ಯನ್ನು ಕಾಂಕ್ರಿಟ್ ನಾಲೆಯನ್ನಾಗಿ ಪರಿವರ್ತಿಸಲಾಗುತ್ತಿದ್ದು, ಕಾಮಗಾರಿ ಯನ್ನು ವಿಸ್ತರಿಸುವ ಕುರಿತು ಸಣ್ಣ ನೀರಾವರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತುತ ೮೦೦ ಮೀಟರ್ ನಷ್ಟು ದೂರದ ಕಾಂಕ್ರಿಟ್ ಕಾಮಗಾರಿಯನ್ನು ರೂ. ೫೧.೨೫ ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಂಪೂರ್ಣ ನಾಲೆಯನ್ನು ಕಾಂಕ್ರಿಟೀಕರಣಗೊಳಿಸ ಬೇಕೆಂದು ಕೃಷಿಕರಿಂದ ಬೇಡಿಕೆ ಬಂದಿರುವ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ರಫೀಕ್ ಅವರು ಕಾಮಗಾರಿಯನ್ನು ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಗುತ್ತಿಗೆದಾರ ಗಣೇಶ್ ಅವರು ಈಗಿನ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಇಲಾಖೆಯ ಮೈಸೂರು ವಿಭಾಗದ ಅಭಿಯಂತರ ರಾಜಶೇಖರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಗುಣಮಟ್ಟದ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಣ್ಣಿನ ನಾಲೆಯ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದ್ದ ಕಾರಣ ಮತ್ತು ಪ್ರತಿ ಮಳೆಗಾಲದಲ್ಲಿ ನಾಲೆಗೆ ಹಾನಿಯಾಗುತ್ತಿದ್ದ ಹಿನ್ನೆಲೆ ಶಾಶ್ವತ ಪರಿಹಾರವಾಗಿ ಕಾಂಕ್ರಿಟ್ ನಾಲೆಯನ್ನು ನಿರ್ಮಿಸಬೇಕೆಂದು ಸ್ಥಳೀಯ ಕೃಷಿಕರು ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಸಣ್ಣ ನೀರಾವರಿ ಇಲಾಖೆಯ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರು ತಕ್ಷಣ ಸ್ಪಂದಿಸಿ ೮೦೦ ಮೀಟರ್ ದೂರದವರೆಗಿನ ಕಾಮಗಾರಿಗೆ ಅನುಮೋದನೆ ದೊರಕಿಸಿಕೊಟ್ಟಿದ್ದರು. ಇದೀಗ ಕಾಮಗಾರಿ ವಿಸ್ತರಣೆಗೂ ಬೇಡಿಕೆ ಬಂದಿದ್ದು, ಅನುದಾನ ದೊರಕಿಸಿಕೊಡುವ ವಿಶ್ವಾಸವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ನಾಲೆಯಿಂದ ನೂರಾರು ರೈತರು ಕೃಷಿ ಕಾರ್ಯವನ್ನು ಕೈಗೊಂಡಿದ್ದು, ಶಾಶ್ವತ ಯೋಜನೆ ಜಾರಿಯಾದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

- ಅಂಚೆಮನೆ ಸುಧಿ