ಸೋಮವಾರಪೇಟೆ, ಜ.೨: ಕೇವಲ ೨೩ ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕೊಡಗಿನ ನವ ವಿವಾಹಿತ ದಂಪತಿ ಸೇರಿದಂತೆ ಒಂದೇ ಕುಟುಂಬದ ಮೂವರು ಇಂದು ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣ ಕ್ಕೀಡಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಕುಂದಳ್ಳಿ ಗ್ರಾಮ ನಿವಾಸಿ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದ ತಂಗಮ್ಮ (೫೫) ಇವರ ಪುತ್ರ ಸುದೀಪ್ (೩೫) ಹಾಗೂ ಪತ್ನಿ ಶ್ರೀಜಾ(೩೦) ಅವರುಗಳೇ ಮೃತಪಟ್ಟವರು.
ಮೈಸೂರಿನಲ್ಲಿ ಮಗ ಹಾಗೂ ಸೊಸೆಯೊಂದಿಗೆ ನೆಲೆಸಿದ್ದ ತಂಗಮ್ಮ ಅವರು ಇಂದು ಅಮಾವಾಸ್ಯೆಯಾದ ಹಿನ್ನೆಲೆ ಬೆಳಿಗ್ಗೆ ತಮ್ಮ ಪುತ್ರ ಹಾಗೂ ಸೊಸೆಯೊಂದಿಗೆ ಕಾರಿನಲ್ಲಿ ಆದಿಚುಂಚನಗಿರಿ ದೇವಾಲಯಕ್ಕೆ ತೆರಳಿ ಮೈಸೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಅಪರಾಹ್ನ ೩ ಗಂಟೆ ಸುಮಾರಿಗೆ ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ಳೂರು ಕ್ರಾಸ್‌ನಿಂದ ಮೈಸೂರಿಗೆ ಆಗಮಿಸುತ್ತಿದ್ದ, ಸುದೀಪ್ ಚಾಲಿಸುತ್ತಿದ್ದ ಸ್ವಿಪ್ಟ್ ಕಾರಿನ ನಡುವೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಜೇವರ್ಗಿ ರಾಷ್ಟಿçÃಯ ಹೆದ್ದಾರಿಯ ಕೆಂಪನಕೊಪ್ಪಲು ಗ್ರಾಮದ ಸಾಮಕಹಳ್ಳಿ ಜಂಕ್ಷನ್ ಬಳಿ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಿಂದ ಸುದೀಪ್, ಪತ್ನಿ ಶ್ರೀಜಾ ಹಾಗೂ ತಾಯಿ ತಂಗಮ್ಮ ಅವರುಗಳು ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.
ಇವರೊಂದಿಗೆ ಕಾರಿನಲ್ಲಿದ್ದ ಸುದೀಪನ ಸಹೋದರಿ ಗೀತಾ ಅವರ ೧೫ ವರ್ಷದ ಪುತ್ರಿ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣಕ್ಕೆ ಉಪಚರಿಸಿ ಬೆಳ್ಳೂರು ಕ್ರಾಸ್ ಬಳಿಯಿರುವ ಆದಿಚುಂಚನಗಿರಿ ಮೆಡಿಕಲ್ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಬಸ್ ಚಾಲಕ ಹಾಗೂ ಬಸ್‌ನಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು, ನಾಗಮಂಗಲ
(ಮೊದಲ ಪುಟದಿಂದ) ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಳ್ಳಿ ಗ್ರಾಮದ ದಿ. ಹೂವಯ್ಯ ಹಾಗೂ ತಂಗಮ್ಮ ದಂಪತಿ ಪುತ್ರ ಸುದೀಪ್ ಹಾಗೂ ಕುಶಾಲನಗರ ಕೂಡ್ಲೂರು ನಿವಾಸಿ ಕೆಂಚಮ್ಮ ಚಂದ್ರಪ್ಪ ಅವರುಗಳ ಪುತ್ರಿ ಶ್ರೀಜಾ ಅವರುಗಳು ಕಳೆದ ಡಿಸೆಂಬರ್ ೧೦ರಂದು ಸೋಮವಾರಪೇಟೆಯಲ್ಲಿ ವೈವಾಹಿಕಜೀವನಕ್ಕೆ ಕಾಲಿಟ್ಟಿದ್ದು, ಕೇವಲ ೨೩ ದಿನಗಳ ದಾಂಪತ್ಯ ಜೀವನ ನಡೆಸಿ ವಿಧಿಯಾಟಕ್ಕೆ ಶರಣಾಗಿದ್ದಾರೆ. ಮೈಸೂರಿನ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಉದ್ಯೋಗದಲ್ಲಿದ್ದ ಸುದೀಪ್, ವಿವಾಹವಾದ ನಂತರ ತಾಯಿ ಹಾಗೂ ಪತ್ನಿಯೊಂದಿಗೆ ಅಲ್ಲಿಯೇ ನೆಲೆಸಿದ್ದರು.
ಮೃತದೇಹಗಳನ್ನು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಕುಟುಂಬ ವರ್ಗಕ್ಕೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ನಾಗಮಂಗಲ ಠಾಣಾಧಿಕಾರಿ ಸತೀಶ್, ಎ.ಎಸ್.ಐ. ಪುಟ್ಟಯ್ಯ ಸೇರಿದಂತೆ ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸೋಮವಾರಪೇಟೆ ಹಾಗೂ ಕುಶಾಲನಗರದಿಂದ ಮೃತರ ಸಂಬAಧಿಕರು ನಾಗಮಂಗಲಕ್ಕೆ ತೆರಳಿದ್ದಾರೆ.