ಗೋಣಿಕೊಪ್ಪಲು, ಜ. ೨: ಗಡಿ ಭಾಗವಾದ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಈ ಸಂಬAಧ ಜಿಲ್ಲೆಯ ೧೦೪ ಪಂಚಾಯಿತಿಗಳಲ್ಲೂ ಕಡತ ಪರಿಶೀಲನೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.

ತಾಲೂಕು ಮಟ್ಟದ ಅಧಿಕಾರಿಗಳು ಆಯಾಯ ಪಂಚಾಯಿತಿಗೆ ತೆರಳಿ ರಶೀದಿ ಪುಸ್ತಕ ತಾಳೆ ನೋಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಅಲ್ಲದೆ ಜನವರಿ ತಿಂಗಳಿನಲ್ಲಿ ಜಿಲ್ಲೆಯ ಹಲವು ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್‌ಗಳಿಗೆ ಬಡ್ತಿ ನೀಡಿ ಕಾರ್ಯದರ್ಶಿ ಹುದ್ದೆ ನೀಡುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಜಿಲ್ಲೆಯ ಪ್ರತಿ ಪಂಚಾಯಿತಿಗಳಲ್ಲಿ ತನಿಖೆ ಮುಗಿದ ನಂತರ ಬಡ್ತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷಿö್ಮ ಮಾಹಿತಿ ನೀಡಿದ್ದಾರೆ.

ಅಲ್ಲದೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಜಿಲ್ಲೆಯ ಹಲವು ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಲ್ ಕಲೆಕ್ಟರ್ ಬಿ.ಎನ್. ಮಹೇಶ್ ಹಾಗೂ ಅಟೆಂಡರ್ ಕೆ.ಜಿ. ರಾಜನ್ ಸಾರ್ವಜನಿಕರಿಂದ ಪಡೆದ ತೆರಿಗೆ ಹಣವನ್ನು ಪಂಚಾಯಿತಿಗೆ ಪಾವತಿಸದೆ ಲಕ್ಷಾಂತರ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿಕೊಂಡಿದ್ದರು.

ಈ ಬಗ್ಗೆ ಇವರಿಬ್ಬರ ಮೇಲೆ ಸಾರ್ವಜನಿಕರ ದೂರಿನನ್ವಯ ಗ್ರಾ. ಪಂ. ಆಡಳಿತ ಮಂಡಳಿ ತುರ್ತು ಸಭೆ ಸೇರಿ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ‘ಶಕ್ತಿ’ ಸಮಗ್ರ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ಇದೀಗ ಇಂತಹ ಪ್ರಕರಣಗಳು ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ನಡೆದಿರಬಹುದು ಎಂಬ ಸಂಶಯದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ.

- ಹೆಚ್.ಕೆ.ಜಗದೀಶ್