ಕಣಿವೆ, ಜ. ೨ : ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಆಹಾರಕ್ಕಾಗಿ ಹಾಹಾಕಾರ ಪಡುತ್ತಾ ಸಂಚಾರ ಮಾಡುತ್ತಿರುವುದರಿಂದ ಗ್ರಾಮದ ಕೃಷಿಕರ ನೆಮ್ಮದಿ ಹಾಳಾಗಿದೆ. ಕಾಡಾನೆಗಳ ಗುಂಪು ಧಾಳಿಯಿಂದ ಈ ಭಾಗದ ಅರಣ್ಯದಂಚಿನ ಕೃಷಿಕರು ಬೆಳೆದ ಅಪಾರ ಪ್ರಮಾಣದ ಬಾಳೆ ಬೆಳೆ ಹಾಗೂ ಸಿಹಿ ಗೆಣಸು ಫಸಲು ಹೆಚ್ಚಾಗಿ ಹಾನಿಗೀಡಾಗಿದೆ.

ಗ್ರಾಮದ ಎಸ್.ಕೆ.ರಾಮೇಗೌಡ ಎಂಬವರಿಗೆ ಸೇರಿದ ೫ ಎಕರೆ ವಿಸ್ತೀರ್ಣದ ಬಾಳೆ ಹಾಗೂ ಅಡಿಕೆ ತೋಟಕ್ಕೆ ಶನಿವಾರ ರಾತ್ರಿ ದಾಳಿ ಮಾಡಿದ ೬ ರಿಂದ ೭ ಕಾಡಾನೆಗಳ ಹಿಂಡು ಒಂದು ಕಡೆಯಿಂದ ಇಡೀ ತೋಟದಲ್ಲಿ ಸಂಚರಿಸಿ ಅರ್ಧ ತಿಂದು ಹಾನಿ ಮಾಡಿದರೆ, ಉಳಿದರ್ಧ ಭಾಗವನ್ನು ತುಳಿದು ನಾಶಪಡಿಸಿವೆ. ಇದರಿಂದಾಗಿ ರೈತ ರಾಮೇಗೌಡರಿಗೆ ಲಕ್ಷಾಂತರ ರೂ ಮೌಲ್ಯದ ಬೆಳೆ ನಷ್ಟವಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ರಾತ್ರಿ ಹಗಲು ಎನ್ನದೇ ಬೆವರು ಸುರಿಸಿ ಅಪಾರ ಪ್ರಮಾಣದ ಹಣ ವ್ಯಯಿಸಿ ಬೆಳೆಸಿದ್ದ ಬಾಳೆ ಫಸಲು ನೆಲಸಮವಾಗಿದ್ದನ್ನು ಕಂಡು ಕಣ್ಣೀರಿಟ್ಟ ರೈತ ರಾಮೇಗೌಡ, ಮಗುವಿನಂತೆ ಅಕ್ಕರೆಯಿಂದ ಆರೈಕೆ ಮಾಡಿದ ತೋಟದ ಫಸಲಿನ ಗಿಡಗಳು ನೆಲಸಮವಾಗಿದ್ದರಿಂದ ವಿಚಲಿತರಾಗಿದ್ದಾರೆ.

ಅಲ್ಲದೇ ಇದೇ ತೋಟದ ಮತ್ತೊಂದು ಬದಿಯಲ್ಲಿ ಬೆಳೆದಿದ್ದ ಕೈಗೆ ಬಂದ ಸಿಹಿ ಗೆಣಸು ಫಸಲನ್ನು ಕೂಡ ಕಿತ್ತು ಒದರಿಕೊಂಡು ತಿಂದಿರುವ ಕಾಡಾನೆಗಳು ಏನನ್ನೂ ಕೂಡ ಉಳಿಸಿಲ್ಲ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ ಎಂದಿರುವ ರೈತ ರಾಮೇಗೌಡ, ಕೂಡಲೇ ಅರಣ್ಯಾಧಿಕಾರಿಗಳು ಇತ್ತ ಬಂದು ನಮಗಾದ ಬೆಳೆ ನಷ್ಟವನ್ನು ಭರಿಸಬೇಕು. ಕಾಡಾನೆಗಳು ಗ್ರಾಮಕ್ಕೆ ನುಸುಳದಂತೆ ಕಾಡಂಚಿನಲ್ಲಿ ಪೂರಕವಾದ ಕಂದಕ ಅಥವಾ ರೈಲ್ವೇ ಕಂಬಿಗಳ ಬೇಲಿ ಅಳವಡಿಸುವ ಮೂಲಕ ರೈತರ ಹಿತರಕ್ಷಣೆಗೆ ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.