ಪೊನ್ನಂಪೇಟೆ, ಜ. ೨: ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಂದ ಹೊರ ಸೂಸುವ ಇಂಗಾಲದ ಡೈ ಆಕ್ಸೆöÊಡ್‌ನಿಂದಾಗಿ ವಾತಾವರಣದಲ್ಲಿ ಏರುಪೇರು ಉಂಟಾಗಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿಯಾದ ಎಲೆಕ್ಟಿçಕ್ ವಾಹನದ ಬಳಕೆಯ ಬಗ್ಗೆ ಜನರು ಒಲವು ತೋರಿದರೆ ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದ ಬೋಧಕರು ವಿದ್ಯುತ್ ಬ್ಯಾಟರಿ ಚಾಲಿತ ಬಹುಪಯೋಗಿ ಜೀಪ್ ಮಾದರಿಯ ವಾಹನವೊಂದನ್ನು ಆವಿಷ್ಕಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮತ್ತು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಆಲೆಮಾಡ ಜಿ. ತಿಮ್ಮಯ್ಯ ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಅಲ್ಲಿನ ಬೋಧಕ ಸಿಬ್ಬಂದಿಗಳು ವಾಹನವನ್ನು ವಿನ್ಯಾಸಗೊಳಿಸಿದ್ದಾರೆ. ೫೦ ಎ.ಹೆಚ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ವಾಹನಕ್ಕೆ ಅಳವಡಿಸಲಾಗಿದ್ದು, ೧.೫ ಕಿಲೋ ವ್ಯಾಟ್ ಬಿಎಲ್‌ಡಿಸಿ ಮೋಟರ್‌ನ ಸಹಾಯದಿಂದ ವಾಹನವನ್ನು ಚಲಾಯಿಸಬಹುದಾಗಿದೆ. ಈ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ ಪ್ರಾಯೋಜಿಸಿದೆ.

ಈ ವಾಹನಕ್ಕೆ ಇವಿ -ಅಔಐಖಿ ಎಂದು ಹೆಸರು ನೀಡಲಾಗಿದ್ದು, ೫೦೦ ಕೆ.ಜಿ.ಯಷ್ಟು ಭಾರ ಹೊರುವ ಸಾಮರ್ಥ್ಯವನ್ನು ವಾಹನ ಹೊಂದಿದೆ. ವಾಹನದ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಲು ೨ ಗಂಟೆಗಳ ಕಾಲ ಬೇಕಾಗಿದ್ದು, ಚಾರ್ಜ್ನ ಸಹಾಯದಿಂದ ೩೦ ಕಿ.ಮೀ. ದೂರ ವಾಹನ ಚಲಾಯಿಸಬಹುದಾಗಿದೆ. ಗಂಟೆಗೆ ೪೦ ಕಿ.ಮೀ. ವೇಗದಲ್ಲಿ ಚಲಾಯಿಸುವ ಸಾಮರ್ಥ್ಯವನ್ನು ವಾಹನ ಹೊಂದಿದ್ದು, ರಿವರ್ಸ್ ಸ್ವಿಚ್, ಎಕ್ಸಿಲೇಟರ್ ಹಾಗೂ ಬ್ರೇಕ್ ಹೊಂದಿದೆ. ಮುಂದಿನ ಸೀಟ್‌ನಲ್ಲಿ ಇಬ್ಬರು ಹಾಗೂ ಹಿಂದಿನ ಸೀಟ್‌ನಲ್ಲಿ ೩ ಮಂದಿ ಸೇರಿದಂತೆ ಒಟ್ಟು ೫ ಮಂದಿ ಪ್ರಯಾಣಿಸಬಹುದಾಗಿದೆ.

ಮೆಕ್ಯಾನಿಕಲ್ ವಿಭಾಗದ ಬೋಧಕರಾದ ಆರ್. ಪ್ರಕಾಶ್, ಕೆ.ಆರ್. ಭವನ್ ಕುಮಾರ್, ಸಿ.ಪಿ. ಮಧು, ಎನ್.ಕೆ. ಚಂದನ್, ಎ.ಯು. ಚಿಟ್ಟಿಯಪ್ಪ ಹಾಗೂ ಮೆಕ್ಯಾನಿಕಲ್ ವಿದ್ಯಾರ್ಥಿಗಳು ವಾಹನ ವಿನ್ಯಾಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಯಶಸ್ವಿಯಾಗಿ ವಾಹನ ನಿರ್ಮಾಣ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ.

- ಚನ್ನನಾಯಕ