ನಾಪೋಕ್ಲು, ಜ. ೨: ಕಳೆದ ಎಂಟು ದಿನಗಳಿಂದ ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಚೌರೀರ ಕಪ್ ವರ್ಣರಂಜಿತವಾಗಿ ತೆರೆಕಂಡಿದೆ. ಫೈನಲ್ ಪಂದ್ಯಾಟದ ಹಾಕಿಯಲ್ಲಿ ನೆಲ್ಲಮಕ್ಕಡ ಹಾಗೂ ಫುಟ್ಬಾಲ್‌ನಲ್ಲಿ ಬಲ್ಲಚಂಡ ತಂಡ ಜಯಭೇರಿ ಗಳಿಸುವದರ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.

ಅAತಿಮ ಹಾಕಿ ಪಂದ್ಯದಲ್ಲಿ ನೆಲ್ಲಮಕ್ಕಡ ಪರದಂಡ ತಂಡವನ್ನು ಸೋಲಿಸಿ ಜಯಗಳಿಸಿದರೆ, ಫುಟ್ಬಾಲ್ ಪಂದ್ಯದಲ್ಲಿ ಬಲ್ಲಚಂಡ ತಂಡವು ಕಳ್ಳಿಚಂಡ ತಂಡದ ವಿರುದ್ದ ಗೆಲುವು ಸಾಧಿಸಿ ವಿಜಯಪತಾಕೆ ಹಾರಿಸಿತು.

ಹಾಕಿ: ಪರದಂಡ ಮತ್ತು ನೆಲ್ಲಮಕ್ಕಡ ನಡುವೆ ನಡೆದ ಫೈನಲ್ ಪಂದ್ಯದ ಮೊದಲಾರ್ಧದಲ್ಲಿ ನೆಲ್ಲಮಕ್ಕಡ ತಂಡದ ಅಪ್ಪಣ್ಣ ಒಂದು ಗೋಲುಗಳಿಸಿದರೆ, ಪರದಂಡ ತಂಡದ ಪ್ರಜ್ವಲ್ ಪೂವಣ್ಣ ಒಂದು ಗೋಲು ಗಳಿಸಿ ಸಮಬಲ ಸಾಧಿಸಿತು. ಪಂದ್ಯದ ದ್ವಿತೀಯಾರ್ಧದಲ್ಲಿ ನೆಲ್ಲಮಕ್ಕಡ ಸೋಮಯ್ಯ ಒಂದು ಗೋಲುಗಳಿಸಿ ೨-೧ ಗೋಲುಗಳ ಮುನ್ನಡೆ ಸಾಧಿಸಿದರೆ, ಪಂದ್ಯದ ಮುಕ್ತಾಯದ ಹಂತದಲ್ಲಿ ಪರದಂಡ ಸೋಮಯ್ಯ ಒಂದು ಗೋಲುಗಳಿಸಿ ಮತ್ತೇ ಸಮಬಲಗೊಂಡಿತು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ನೆಲ್ಲಮಕ್ಕಡ ತಂಡದ ಆಟಗಾರರು ೩ ಗೋಲು ಹೊಡೆಯುವದರ ಮೂಲಕ ವಿಜಯ ಸಾಧಿಸಿದರು. ಪರದಂಡ ತಂಡವು ಕೇವಲ ಒಂದು ಗೋಲು ಗಳಿಸಿ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಫುಟ್ಬಾಲ್: ಫುಟ್ಬಾಲ್ ಪಂದ್ಯದಲ್ಲಿ ಚೌರೀರ (ಪೋದ್) ತಂಡವನ್ನು ಸೋಲಿಸಿ ಕಳ್ಳಿಚಂಡ, ಮುರುವಂಡ ವಿರುದ್ಧ ಬಲ್ಲಚಂಡ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಕಳ್ಳಿಚಂಡ ಹಾಗೂ ಬಲ್ಲಚಂಡ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಬಲ್ಲಚಂಡ ತಂಡವು ಚೌರೀರ ಕಪ್ ಫುಟ್ಬಾಲ್ ಚಾಂಪಿಯನ್ ಆದರೆ ಕಳ್ಳಿಚಂಡ ತಂಡವು ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆ ಕ್ರೀಡೆಯ ತವರೂರಾಗಿದ್ದು, ವಿದ್ಯೆಗೆ ನೀಡುವಷ್ಟೇ ಮಹತ್ವವನ್ನು ಕ್ರೀಡೆಗೂ ನೀಡುತ್ತಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ ಎಂದರು.

ರಾಜ್ಯ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮಾತನಾಡಿ ಕೊಡವ ಜನಾಂಗದ ಸಂಸ್ಕೃತಿ ಹಾಗೂ ಕ್ರೀಡೆ ವಿಶಿಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿ ಸೇನೆಗೆ ಹಾಗೂ ಕ್ರೀಡೆಗೆ ಯುವಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಯುವ ಜನಾಂಗ ಕ್ರೀಡೆ ಹಾಗೂ ಸೇನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವದರ ಮೂಲಕ ಕೊಡಗು ಜಿಲ್ಲೆಯ ಕೀರ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಒಲಂಪಿಯನ್ ಅಂಜಪರವAಡ ಬಿ.ಸುಬ್ಬಯ್ಯ ಮಾತನಾಡಿ ಕ್ರೀಡೆಯಲ್ಲಿ ಶಿಸ್ತು ಹಾಗೂ ಕೌಶಲ್ಯವನ್ನು ಬೆಳೆಸಿಕೊಂಡರೆ ಕ್ರೀಡಾಪಟುಗಳು ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ ಮಾತನಾಡಿ ಯುವ ಜನಾಂಗ ಮಾದಕ ವ್ಯಸನದಿಂದ ದೂರವಿರಬೇಕು. ಉತ್ತಮ ಗುರಿಯನ್ನು ಹೊಂದಿ ಸಾಧನೆ ಮಾಡಬೇಕು ಎಂದರು.

(ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಚೌರೀರ ಕುಟುಂಬದ ಪಟ್ಟೆದಾರ ಚೌರೀರ ಕೆ.ಪೂವಯ್ಯ, ಹಿರಿಯರಾದ ಚೌರೀರ ಉತ್ತಪ್ಪ ಮಾಳೆಯಂಡ ಅಶೋಕ್ ಪೂವಯ್ಯ, ಡಾ. ಶ್ಯಾಮ್ ಅಪ್ಪಣ್ಣ, ಹಾಕಿ ಕೂರ್ಗ್ ಪದಾಧಿಕಾರಿಗಳು ಇದ್ದರು.

ಹಾಕಿ: ಮ್ಯಾನ್ ಆಫ್ ದ ಮ್ಯಾಚ್- ಪರದಂಡ ಕೀರ್ತನ್ ಮೊಣ್ಣಪ್ಪ, ಉತ್ತಮ ಆಟಗಾರ- ಕುಪ್ಪಂಡ ಜಗತ್ ಬೆಳ್ಯಪ್ಪ, ಕ್ರೀಡಾಕೂಟದ ಉತ್ತಮ ಆಟಗಾರ- ನೆಲ್ಲಮಕ್ಕಡ ಸೋಮಯ್ಯ ಪ್ರಶಸ್ತಿ ಪಡೆದುಕೊಂಡರು.

ಫುಟ್ಬಾಲ್: ಮ್ಯಾನ್ ಆಫ್ ದಿ ಮ್ಯಾಚ್- ಸೋನು ಗಣಪತಿ, ಉದಯೋನ್ಮುಖ ಆಟಗಾರ - ಮುಕ್ಕಾಟಿರ ರಿಯಾ ಅಪ್ಪಚ್ಚು, ಉತ್ತಮ ಆಟಗಾರ- ಪೆಮ್ಮಂಡ ವಚನ್ ನಾಚಪ್ಪ, ಉತ್ತಮ ಗೋಲ್‌ಕೀಪರ್ - ಕಳ್ಳಿಚಂಡ ಗೌತಮ್, ಕ್ರೀಡಾಕೂಟದ ಉತ್ತಮ ಆಟಗಾರ- ಬಲ್ಲಚಂಡ ಕಾರ್ಯಪ್ಪ ಪ್ರಶಸ್ತಿ ಪಡೆದುಕೊಂಡರು.

ಚೌರೀರ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿ ತಳಿಯಕ್ಕಿ ಬೊಳಕ್‌ನೊಂದಿಗೆ ಮುಖ್ಯ ಅತಿಥಿಗಳನ್ನು ಬರಮಾಡಿಕೊಂಡರು.