ಗೋಣಿಕೊಪ್ಪಲು, ಡಿ. ೩೦: ತಾಲೂಕು ಆಡಳಿತದಿಂದ ಕೈಗೊಂಡು ಒತ್ತುವರಿ ಕಾರ್ಯದಿಂದ ಸ್ಥಳೀಯರಿಗೆ ಸಮಸ್ಯೆ ಆಗಿದೆ, ನಗರದಲ್ಲಿ ಏಕಮುಖ ಸಂಚಾರದಿAದ ವ್ಯಾಪಾರ ವಹಿವಾಟಿಗೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಗೋಣಿಕೊಪ್ಪ ಗ್ರಾಮಸ್ಥರು ಆಕ್ಷೇಪಿಸಿದರು.

ನಗರದ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಅಧ್ಯಕ್ಷೆ ಚೈತ್ರಾ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಗ್ರಾಮ ಸಭೆ ನಡೆಯಿತು.

ತಹಶೀಲ್ದಾರ್ ಯೋಗಾನಂದ್ ತಮಗೆ ಬೇಕಾದ ರೀತಿಯಲ್ಲಿ ಒತ್ತುವರಿ ತೆರವು ಕಾರ್ಯ ಕೈಗೊಂಡಿದ್ದಾರೆ. ಇದರಿಂದಾಗಿ ಹಲವು ತಡೆಗೋಡೆ ಹಾಳಾಗಿವೆ. ಅಲ್ಲದೇ ಮನೆಗಳಿಗೆ ಹಾನಿ ಸಂಭವಿಸಿದೆ. ಅದ್ದರಿಂದ ಕೂಡಲೇ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಬೈಪಾಸ್ ರಸ್ತೆ ಕೈತೋಡು ಬದಿಯ ನಾಗರಿಕರು ಒತ್ತಾಯಿಸಿದರು.

ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಪಿಡಿಒ ತಿಮ್ಮಯ್ಯ, ತಾಲೂಕು ಆಡಳಿತದಿಂದ ಒತ್ತುವರಿ ತೆರವು ಬಗ್ಗೆ ನೋಟೀಸ್ ಜಾರಿಗೊಳಿಸಲಾಗಿತ್ತು. ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು, ಆದರೆ, ಯಾರು ಈ ಬಗ್ಗೆ ಆಕ್ಷೇಪಿಸದ ಹಿನ್ನೆಲೆ ಹೊಳೆಯ ನಕ್ಷೆಯಂತೆ ಒತ್ತುವರಿ ತೆರವು ಕಾರ್ಯ ನಡೆಸಲಾಗಿದೆ. ಇದೀಗ ಕೀರೆಹೊಳೆ ಒತ್ತುವರಿ ತೆರವು ಕಾರ್ಯಕ್ಕೆ ತಾತ್ಕಾಲಿಕ ತಡೆಯಾಜ್ಞೆ ಸಿಕ್ಕಿದೆ. ಆಗಾಗಿ ಈ ವಿಚಾರದಲ್ಲಿ ಚರ್ಚೆ ಅನಗತ್ಯ ಎಂದು ವಿಷಯಕ್ಕೆ ತೆರೆ ಎಳೆದರು.

ಗ್ರಾಮಸ್ಥರಾದ ಪರಶುರಾಮ, ಗೋವಿಂದಪ್ಪ, ಕುಮಾರ್ ಮಹದೇವ, ಮುರುಗ,ಅಬ್ದುಲ್ ಸಮ್ಮದ್ ಮತ್ತಿತರರು ಪೌರಕಾರ್ಮಿಕರ ವಸತಿ ಸೌಕರ್ಯದ ಬಗ್ಗೆ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಗ್ರಾ.ಪಂ. ಸದಸ್ಯ ಬಿ.ಎನ್.ಪ್ರಕಾಶ್ ಪೌರ ಕಾರ್ಮಿಕರಿಗೆ ವಿವಿಧ ಬಡಾವಣೆಯಲ್ಲಿ ಪಂಚಾಯತಿಗೆ ನೀಡಿರುವ ಜಾಗದಲ್ಲಿ ಸುಸಜ್ಜಿತ ಆರ್.ಸಿ.ಸಿ.ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಅಧಿಕಾರದ ಅವಧಿಯಲ್ಲಿ ಕನಿಷ್ಟ ೧೨ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ, ಮುಂದೆ ವಸತಿ ಸೌಕರ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಉತ್ತರಿಸಿದರು.

ನಿವಾಸಿ ಪಿ.ಕೆ.ಪ್ರಣೀತ್ ಏಕಮುಖ ಸಂಚಾರದಲ್ಲಿ ಪೊಲೀಸ್ ಇಲಾಖೆ ಸರಿಯಾಗಿ ಜಿಲ್ಲಾಡಳಿತಕ್ಕೆ ವರದಿ ನೀಡಿಲ್ಲ ಎಂದು ಆರೋಪಿಸಿದರು, ಈ ವಿಷಯದಲ್ಲಿ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಂಡಿ ದ್ದಾರೆ ಕೂಡಲೇ ಈ ಬಗ್ಗೆ ಗ್ರಾಮ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿ ಗಳಿಗೆ ಕಳುಹಿಸಿ ಅವೈಜ್ಞಾನಿಕವಾಗಿರುವ ಏಕಮುಖ ಸಂಚಾರ ತೆಗೆಯುವಂತೆ ಒತ್ತಾಯಿಸಿದರು.

ನಗರದಲ್ಲಿ ಖಾಲಿ ಇರುವ ಜಾಗವನ್ನು ಪಂಚಾಯತಿ ವ್ಯಾಪ್ತಿಗೆ ತೆಗೆದುಕೊಂಡು ನಿವೇಶನ ರಹಿತರಿಗೆ, ಕಸ ವಿಲೇವಾರಿಗೆ ಬಳಸಿಕೊಳ್ಳುವಂತೆ ಮಾಜಿ ಅಧ್ಯಕ್ಷ ಬಿ.ಡಿ.ಮುಕುಂದ, ಕುಪ್ಪಂಡ ಗಣೇಶ್ ತಿಮ್ಮಯ್ಯ ಗಮನ ಸೆಳೆದರು.

ಪಟ್ಟಣದ ಕೆಲವು ಮುಖ್ಯ ರಸ್ತೆಗಳಿಗೆ ಹರದಾಸ ಅಪ್ಪಚುಕವಿ, ಜನರಲ್ ತಿಮ್ಮಯ್ಯ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಹಾಗೂ ಅಂಬೇಡ್ಕರ್ ಪುತ್ಥಳಿಯನ್ನು ಪಟ್ಟಣದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗ್ರಾ.ಪಂ ಅಧ್ಯಕ್ಷೆ ಚೈತ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಪೂರಕ ಸಹಕಾರ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಗಾ.ಪಂ. ಉಪಾಧ್ಯಕ್ಷರಾದ ಸವಿತಾ ನೋಡಲ್ ಅಧಿಕಾರಿ ಚೆಲುವರಾಜ್ ಸೇರಿದಂತೆ ಗಾ.ಪಂ. ಸದಸ್ಯರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್

ಎನ್.ಎನ್. ದಿನೇಶ್