ಕೂಡಿಗೆ. ಡಿ, ೩೦: ವೈಜ್ಞಾನಿಕ ಕಸವಿಲೇವಾರಿಗೆ ಕ್ರಮಕೈಗೊಳ್ಳುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಜನಪ್ರತಿನಿದಿ ಹಾಗೂ ಅಧಿಕಾರಿಗಳ ಮನವೊಲಿಕೆ ಹಿನ್ನೆಲೆ ಕೈಬಿಡಲಾಯಿತು.

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಕೆ ಮಾಡಿ ಕಸ ವಿಲೇವಾರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಿಲ್ಲ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಿದೆ. ಇದಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಮತ್ತು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ವಿಭಾಗದ ಸದಸ್ಯರು ಪ್ರತಿಭಟನೆಗೆ ಸಜ್ಜಾಗಿದ್ದರು.

ಪ್ರತಿಭಟನೆ ಮಾಡಲು ಉದ್ದೇಶಿಸಿದ್ದ ಸ್ಥಳಕ್ಕೆ ಪ್ರತಿಭಟನೆ ಮಾಡುವ ಮುನ್ನ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯ ಅಮೃತರಾಜ್ ಹಾಗೂ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ತಾ. ೩೧ ರಿಂದಲೆ ವೈಜ್ಞಾನಿಕ ಕಸ ವಿಲೇವಾರಿ ವ್ಯವಸ್ಥೆ ಕಾಮಗಾರಿಯು ಪ್ರಾರಂಭ ಮಾಡಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆ ಮುಂದೂಡಲು ಕುಶಾಲನಗರ ಪ.ಪಂ. ಅಧ್ಯಕ್ಷ ಜಯವರ್ಧನ್ ಕೋರಿದರು.

ಅಧ್ಯಕ್ಷರ ಮನವಿಯ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಪ್ರತಿಭಟನೆ ಮುಂದಾಳತ್ವ ವಹಿಸಿದ್ದವರು ತಿಳಿಸಿದರು.

ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಅನಂತ, ಚಂದ್ರು, ಜಯಶೀಲ, ಟಿ.ಪಿ.ಹಮೀದ್, ಅರುಣರಾವ್, ರೈತ ಮುಖಂಡ ನಂಜುAಡಸ್ವಾಮಿ, ದೇವಪ್ಪ, ರೇವಣ್ಣ, ನಾಗರಾಜ್, ಸುರೇಶ್ ಸೇರಿದಂತೆ ಹಲವಾರು ರೈತರು ಇದ್ದರು.

ಕೆಲಸ ಆರಂಭ

ರೂ. ೬೪ ಲಕ್ಷ ವೆಚ್ಚದ ವೈಜ್ಞಾನಿಕ ಕಸ ವಿಲೇವಾರಿ ಯೋಜನೆ ಕಾಮಗಾರಿಯ ಮೊದಲ ಹಂತವಾಗಿ ಕಸ ವಿಲೇವಾರಿ ಘಟಕಕ್ಕೆ ಹೋಗುವ ದಾರಿ ಮತ್ತು ಪ್ರಾಥಮಿಕ ಕಾಮಗಾರಿಯ ಕೆಲಸವನ್ನು ಕುಶಾಲನಗರ ಪಟ್ಟಣ ಪಂಚಾಯತಿ ಜೆಸಿಬಿ ಯಂತ್ರಗಳ ಮೂಲಕ ಕೆಲಸ ಆರಂಭಗೊAಡಿದೆ.