ಸಿದ್ದಾಪುರ, ಡಿ. ೩೦: ಒಂದೂವರೆ ತಿಂಗಳ ಹಿಂದೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕನಿಗೆ ಚಿಕಿತ್ಸೆ ವೆಚ್ಚ ನೀಡದೆ ನಿರ್ಲಕ್ಷ್ಯ ತೋರುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಜ. ೩ ರಂದು ಆದಿವಾಸಿಗಳನ್ನು ಒಗ್ಗೂಡಿಸಿ ಮತ್ತಿಗೋಡು ಅರಣ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಎಚ್ಚರಿಸಿದ್ದಾರೆ.
ಆದಿವಾಸಿ ಸಮುದಾಯದ ಕಾರ್ಮಿಕ ರವಿ ಆನೆ ದಾಳಿಯಿಂದ ಗಾಯಗೊಂಡು ಮೈಸೂರಿನ ಡಿಎಂಆರ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಇದೀಗ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಸೂಚಿಸಿದ್ದಾರೆ.
ಚಿಕಿತ್ಸಾ ವೆಚ್ಚ ಅಂದಾಜು ರೂ. ೩ ಲಕ್ಷಕ್ಕೂ ಹೆಚ್ಚು ಬಿಲ್ ಪಾವತಿಸಬೇಕಾಗಿದ್ದು, ರವಿ ಕುಟುಂಬ ಅತ್ಯಂತ ಬಡ ಕಾರ್ಮಿಕ ಕುಟುಂಬವಾಗಿರುವುದರಿAದ ಅಷ್ಟು ಹಣ ಕಟ್ಟಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿ ದಿನಕಳೆಯುತ್ತಿದ್ದಾರೆ. ಕಾಡಾನೆ ದಾಳಿ ಸಂದರ್ಭ ಸಿದ್ದಾಪುರ ಆಸ್ಪತ್ರೆಗೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ವೆಚ್ಚ ನೀಡುವುದಾಗಿ ಭರವಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರವಿಗೆ ಯಾವುದೇ ಪರಿಹಾರ ಹಾಗೂ ಆಸ್ಪತ್ರೆಯ ಚಿಕಿತ್ಸೆ ವೆಚ್ಚವು ನೀಡದೆ ಅಸಹಾಯಕತೆ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರವಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ ಅವರು ಚಿಕಿತ್ಸೆ ವೆಚ್ಚ ನೀಡದ ಅರಣ್ಯ ಇಲಾಖೆ ವಿರುದ್ಧ ಮತ್ತಿಗೋಡು ಅರಣ್ಯ ಕಚೇರಿ ಮುಂದೆ ಜ. ೩ ರಂದು ಆದಿವಾಸಿಗಳನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಘಟನೆ ಹಿನ್ನೆಲೆ
ವೀರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಿಂದ ಕೆಲಸ ಮುಗಿಸಿ ಲಿಂಗಾಪುರ ಸಮೀಪವಿರುವ ಮಾಲಕಟ್ಟಿ ಹಾಡಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿಯಿಂದ ರವಿ ಹಾಗೂ ಶಶಿ ಕಾರ್ಮಿಕರಿಬ್ಬರು ಗಂಭೀರ ಗಾಯಗೊಂಡಿದ್ದು ಬೈಕ್ ಸಂಪೂರ್ಣ ಜಖಂಗೊAಡಿತ್ತು. ಕಾಡಾನೆ ದಾಳಿಯಿಂದ ಗಾಯಗೊಂಡ ಇಬ್ಬರನ್ನೂ ಹಾಡಿ ನಿವಾಸಿಗಳು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದರು.
ಅಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ವೆಚ್ಚ ನೀಡುವುದಾಗಿ ಭರವಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಗಂಭೀರ ಗಾಯಗೊಂಡಿದ್ದ ರವಿ ಎಂಬವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಎಂಆರ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿರುವ ರವಿ ಡಿಸ್ಚಾರ್ಜ್ ಮಾಡಲು ಹಣ ನೀಡಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.