ಮಡಿಕೇರಿ, ಡಿ. ೩೦: ಮಕ್ಕಳ ರಕ್ಷಣಾ ನಿರ್ದೇಶನಾಲಯ ವತಿಯಿಂದ ರಾಜ್ಯದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದ ಬಾಧಿತ ಮಕ್ಕಳನ್ನು ಬೆಂಬಲಿಸಲು ಹೆಚ್ಚಿನ ಸಂದರ್ಭಗಳಲ್ಲಿ ಮಗುವಿಗೆ ಪಾಲನೆ ಮತ್ತು ರಕ್ಷಣೆ ಒದಗಿಸಲು ವಿಸ್ತೃತ ಕುಟುಂಬ/ ಏಕಪೋಷಕರ ನೆರವಿದ್ದರೂ ಸಹ ತಂದೆ, ತಾಯಿಯರನ್ನು ಕಳೆದುಕೊಂಡ ೧೮ ವರ್ಷದೊಳಗಿನ ಮಗುವನ್ನು ಮಾನಸಿಕ ಆಘಾತದಿಂದ ಹೊರತರಲು ಹಾಗೂ ಮಗುವಿನ ದೀರ್ಘಕಾಲಿಕ ಸಕಾರಾತ್ಮಕ ಬೆಳವಣಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅನುವಾಗುವಂತೆ ಬಾಲ ಹಿತೈಷಿ (ಮಾರ್ಗದರ್ಶಕತ್ವ/ ಮೆಂಟರ್ಶಿಪ್) ಎಂಬ ಹೊಸ ಯೋಜನೆ ಜಾರಿಗೊಳಿಸಲಾಗಿದೆ.
ಇಬ್ಬರು ಪೋಷಕರು ಅಥವಾ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಶೈಕ್ಷಣಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ, ತಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಸಾಧಿಸಲು ಅವರಿಗೆ ಇದಕ್ಕೆ ಪೂರಕವಾಗಿ ಸಹಾಯ ಮಾಡಲು ಮತ್ತು ಮಗುವಿಗೆ ಮಾರ್ಗದರ್ಶನ ನೀಡಲು ಉತ್ಸುಕರಾಗಿರುವ ಮಾರ್ಗದರ್ಶಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನೋಂದಾಯಿಸಿಕೊಳ್ಳಬಹುದು.
ಮಾರ್ಗದರ್ಶಕರಿಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ವತಿಯಿಂದ ಸೂಕ್ತ ತರಬೇತಿ ನೀಡಲಾಗುವುದು. ಮಾರ್ಗ ದರ್ಶಕರಾಗಿ ಸೇವೆ ಸಲ್ಲಿಸುವವರಿಗೆ ಇಲಾಖೆಯಿಂದ ಯಾವುದೇ ಗೌರವಧನ, ಶುಲ್ಕವನ್ನು ಪಾವತಿಸಲಾಗುವುದಿಲ್ಲ. ಹಾಗೂ ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರ ಕಚೇರಿ, ಕಲ್ಯಾಣ ಮಂಟಪದ ಮುಂಭಾಗ, ಓಂಕಾರೇಶ್ವರ ದೇವಸ್ಥಾನ ರಸ್ತೆ, ಮಡಿಕೇರಿ ದೂ.ಸಂ. ೦೮೨೭೨-೨೨೮೮೦೦ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ತಿಳಿಸಿದ್ದಾರೆ.