‘‘ನಮಗೆ ಪ್ರೀತಿಪಾತ್ರವಾದ ವಸ್ತುಗಳಿರಬಹುದು, ಜನರಿರಬಹುದು, ಸ್ಥಳಗಳಿರಬಹುದು, ಎಲ್ಲವೂ ಬದಲಾವಣೆ ಹೊಂದುತ್ತವೆ, ದುರ್ಬಲವಾಗುತ್ತವೆ, ವಿಯೋಗ ಹೊಂದುತ್ತವೆ’’ ಎನ್ನುವ ಪ್ರಕೃತಿಯ ಕಹಿ ಸತ್ಯವನ್ನು ನಮಗೆಲ್ಲರಿಗೂ ಮನವರಿಕೆ ಮಾಡಿಕೊಟ್ಟ ವರ್ಷ ಕೊನೆಗೊಂಡು ರೂಡಿಗತವಾಗಿ ಬಂದ ಆಚರಣೆಯಂತೆ ಹೊಸ ವರ್ಷ ಕಾಲಿಟ್ಟಿದೆ. ಕಳೆದ ಇಪ್ಪತ್ತು ತಿಂಗಳುಗಳಿAದ ‘‘ದೈವಾಧೀನಂ ಜಗತ್ಸರ್ವಂ’’ ಎನ್ನುವ ಶ್ರೀ ಕೃಷ್ಣ ಉವಾಚ ನಮಗೆಲ್ಲರಿಗೂ ಸ್ಪಷ್ಟವಾಗಿ ಅರ್ಥವಾಗಿ ಹೋಗಿದೆ.

‘‘ಜೀವಂತ ಜೀವಿಗಳನ್ನು ತಿನ್ನುವ ಆ ಜನರಿಗೆ ಕೊರೊನಾ ಎನ್ನುವ ವೈರಸ್ ನಿಂದ ರೋಗ ಬಂದಿದೆಯAತೆ ‘‘ಎಂಬ ಹಾಸ್ಯಮಯ ಸಂದೇಶಗಳ ರವಾನೆಯಿಂದ ಆರಂಭಗೊAಡ ನಮ್ಮ ಸಂಭಾಷಣೆಗಳು’’ ಬದುಕಿ ಉಳಿದರೆ ಅದೇ ಸಾಧನೆ ‘‘ಎನ್ನುವಲ್ಲಿಯವರೆಗೆ ಬಂದು ತಲುಪಿದೆ. ಆರಂಭದಲ್ಲಿ ಅಣುವಿನ ಕಣದ ಬಗ್ಗೆ ಅಷ್ಟೇನೂ ಆತಂಕವಾಗಿರದಿದ್ದರೂ, ಅಲ್ಲಿ -ಇಲ್ಲಿ ಕೇಳಿದ, ನೋಡಿದ ದುರ್ಘಟನೆಗಳು ಮನದಲ್ಲಿ ಭಯದ ಛಾಯೆಯನ್ನು ಮೂಡಿಸಿದ್ದಿದೆ. ಎಲ್ಲೋ ಸಂಭವಿಸುತ್ತಿದ್ದ ಸಾವು -ನೋವುಗಳು ನಮ್ಮ ಅಕ್ಕ -ಪಕ್ಕ, ಕೊನೆಗೆ ನಮ್ಮ ಕುಟುಂಬದೊಳಗೇ ಬಂದು ನಮ್ಮ ಪ್ರೀತಿಪಾತ್ರರನ್ನು, ಬಂಧುಗಳನ್ನು ಇನ್ನಿಲ್ಲವಾಗಿಸಿದಾಗ ‘‘ಸೂಳ್ ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್’’ (ಸರದಿ ಬರಲಿಕ್ಕಿದೆ) ಎನ್ನುವ ಕವಿವಾಣಿಗೆ ಬದ್ಧವಾಗಿ ಮನ ಹದಗೊಂಡದ್ದೂ ಇದೆ. ಇದ್ದಷ್ಟು ದಿನ ಇರುವುದು ಎಂಬ ವೈರಾಗ್ಯದೊಂದಿಗೆ ‘‘ಬದುಕು’’ ಎನ್ನುವ ಪದವನ್ನೇ ಆತ್ಮಾವಲೋಕನಕ್ಕೆ ಹಚ್ಚಿದ ವರ್ಷ ಕೊನೆಗೊಂಡಿದೆ. ಬಾಳಿನ ಸಾರ್ಥಕತೆಯತ್ತ ಚಿಂತಿಸುತ್ತಿರು ಎನ್ನುವಂತೆ ಹೊಸ ಹೊಸ ವೈರಾಣುಗಳ ಸೇರ್ಪಡೆ ಆಗುತ್ತಲೇ ಇವೆ.

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು, ಕ್ಷಿತಿ ಗರ್ಭ ಧರಿಸುವಳು, ಮತ್ತುದಿಸುವುದು ಜೀವ, ಸತತ ಕೃಷಿಯೋ ಪ್ರಕೃತಿ. ಎಂಬ ಡಿವಿಜಿ ಯವರ ಮಾತಿನಂತೆ ಜೀವನ ಚಕ್ರ ಕಾಲದ ಜೊತೆ ಜೊತೆಗೆ ಸಾಗುತಲಿದೆ. ಹೊಸ ವರ್ಷ ಬಂದಿದೆ ಹೊಸ ಹೊಸ ಕನಸುಗಳನ್ನು ಕಾಣಲು, ಭರವಸೆಯ ಹೆಜ್ಜೆಗಳನ್ನಿಡಲು, ಮನಕೆ ಮುದ ನೀಡುವ ಅರ್ಥಪೂರ್ಣ ದಾರಿಯನ್ನರಸಲು, ಬನ್ನಿ ಒಗ್ಗೂಡಿ ಸಾಗುವ.

ಭಾರತದಲ್ಲಿ ಬಹುತೇಕ ಜನರಿಗೆ ಕೊರೊನಾ ನಿರೋಧಕ ಲಸಿಕೆ ಸಿಕ್ಕಿರುವ ಕಾರಣ ಆತಂಕ, ಭಯ, ಹತಾಶೆಗಳಿಂದ ನಾವು ಹೊರಬಂದಿದ್ದೇವೆ. ಬದುಕಿನ ಹಾದಿಯಲ್ಲಿ ಸವಾಲೆಸೆಯುವ ಇಂತಹ ಸಮಸ್ಯೆಗಳು ಎದುರಾದಾಗ ಜಾಗೃತೆ ಹೇಳಿ ನಮ್ಮನ್ನು ಮುನ್ನಡೆಸುವ ಆಡಳಿತ ವ್ಯವಸ್ಥೆಯಿದೆ. ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುವ ಅದೆಷ್ಟೋ ಸಮಾಜ ಸೇವಕರಿದ್ದಾರೆ. ತಪ್ಪದಂತೆ ಎಚ್ಚರಿಕೆಯ ಕರೆ ನೀಡುವ ಮಾಧ್ಯಮಗಳು ಇವೆ, ಎಲ್ಲಕ್ಕೂ ಮಿಗಿಲಾಗಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುತ್ತ ಸಾಗುತ್ತಿರುವ ನಮ್ಮ ಒಡನಾಡಿಗಳು ಇದ್ದಾರೆ. ಪ್ರಜೆಯಿಂದ ಹೆಜ್ಜೆ ಹಾಕೋದಷ್ಟೇ ನಾವು ಮಾಡಬೇಕಾದ ಕೆಲಸ. ಭಗವಾನ್ ಬುದ್ಧ ಹೇಳಿದಂತೆ,

‘‘ಆರೋಗ್ಯವೇ ಪರಮ ಸಂಪತ್ತು : ಸಂಬAಧವೇ ಪರಮ ಭಾಗ್ಯ’’ ಅನ್ನೋದನ್ನು ಅರಿತು ನಡೆದರೆ ಬಾಳು ಸುಲಲಿತವಾಗಿ ಸಾಗುತ್ತದೆ.

ಆರ್ಥಿಕ ಅಭಿವೃದ್ಧಿ, ಶಿಕ್ಷಣದ ಗುಣಮಟ್ಟದ ಸುಧಾರಣೆ, ಹೊಸ ಉದ್ಯೋಗಗಳ ಸೃಷ್ಟಿಯೇ ಮೊದಲಾದ ಸಂತೋಷದಾಯಕ ಅಂಶಗಳಿಗೆ ಹೊಸ ವರ್ಷ ಹೊಸ ಮುನ್ನುಡಿ ಬರೆಯಲಿ. ಪ್ರಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಹೊಸ ಚಿಂತನೆಗಳು ನಮ್ಮಲ್ಲಿ ಮೂಡಲಿ. ಸಮಸ್ಯೆಯೇ ಅಲ್ಲದ ಸಮಸ್ಯೆಗಳಿಗೆ ಹೋರಾಡುತ್ತಾ ಹಕ್ಕುಗಳ ಚಲಾವಣೆಗಾಗಿ ಹಂಬಲಿಸುವ ನಮ್ಮಲ್ಲಿ ಕರ್ತವ್ಯ ಪ್ರಜ್ಞೆ ಜಾಗೃತಿಗೊಳ್ಳಲಿ. ವಿಜ್ಞಾನ -ತಂತ್ರಜ್ಞಾನಗಳಿAದ ವೈಜ್ಞಾನಿಕ ಬೆಳವಣಿಗೆ ಆಗುತ್ತಾ ಸಾಗಿದಂತೆ ನಮ್ಮಲ್ಲಿ ವೈಚಾರಿಕ ಚಿಂತನೆಗಳೂ ಮೂಡುತ್ತಿರಲಿ.

‘‘ಕೃಷಿತೋ ನಾಸ್ತಿ ದುರ್ಭಿಕ್ಷಮ್’’ ಕೃಷಿಯಿಂದ ದೇಶ ಸುಭಿಕ್ಷದತ್ತ ಸಾಗಲಿ. ಎಲ್ಲಕ್ಕೂ ಮುಖ್ಯವಾಗಿ ಏನೇ ಸಮಸ್ಯೆಗಳು ಎದುರಾದರೂ ಛಲವಿಕ್ರಮನಂತೆ ಮುನ್ನುಗ್ಗಿ ನಡೆವ ಮನವೂ ಬಲವೂ ನಮ್ಮದಾಗಲಿ. ಎಂಥ ಸಂಕಷ್ಟಗಳ ಸಂದರ್ಭಗಳಲ್ಲೂ ದೇವರ ಅನುಗ್ರಹದಿಂದ ಬದುಕಿಗೆ ದಾರಿ ತೆರೆದುಕೊಳ್ಳುತ್ತಲೇ ಇರಲಿಲ್ಲವೇ? ದೈವಶಕ್ತಿಯು ಜನನಿಯ ರೀತಿಯಲ್ಲಿ ನಮ್ಮನ್ನು ಪೊರೆಯುತ್ತದೆ ಎನ್ನುವ ದಾಸವಾಣಿಯನ್ನು ಸ್ಮರಿಸುತ್ತಾ,

‘‘ಸರ್ವೇ ಜನಾ: ಸುಖಿನೋ ಭವಂತು’’.

-ಜಯಲಕ್ಷಿö್ಮ ಕೆ., ಮಡಿಕೇರಿ