(ವಿಶೇಷ ವರದಿ : ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಡಿ. ೩೦ : ಇತ್ತೀಚೆಗೆ ಭತ್ತ ಬೆಳೆಯುವ ರೈತನಿಗೆ ಒಂದಲ್ಲ ಒಂದು ಸಮಸ್ಯೆ ವರ್ಷಂಪ್ರತಿ ಎದುರಾಗುತ್ತಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ಕಂಗಾಲಾಗಿದ್ದಾನೆ. ಆದರೂ ಭೂ ತಾಯಿಯನ್ನು ನಂಬಿ ಬೀಜ ಬಿತ್ತನೆ ನಡೆಸಿ, ವರ್ಷದ ಭತ್ತದ ಬೆಳೆಯನ್ನು ತೆಗೆಯುತ್ತಿದ್ದಾನೆ. ಆದರೆ ರೈತ ನಿರೀಕ್ಷಿಸಿರುವ ಬೆಲೆ ಸಿಗದೆ ಸಂಕಷ್ಟಕ್ಕೀಡಾಗಿದ್ದಾನೆ. ಭತ್ತದೊಂದಿಗೆ ಒಣ ಹುಲ್ಲನ್ನು ಮಾರಾಟ ಮಾಡಿ ಇದರಲ್ಲಿ ಬರುವ ಹಣವನ್ನು ಸರಿದೂಗಿಸಿಕೊಳ್ಳುವ ಪ್ರಯತ್ನ ಮಾಡಲು ಹೊರಟರೆ ಈ ಪ್ರಯತ್ನಕ್ಕೆ ಮಧ್ಯವರ್ತಿಗಳ ಹಾವಳಿಯಿಂದಾಗಿ ತಾನು ಬೆಳೆದ ಭತ್ತದ ಹುಲ್ಲಿಗೆ ಸೂಕ್ತ ಬೆಲೆ ಇಲ್ಲದೆ ನಲುಗುತ್ತಿದ್ದಾನೆ.
ರೈತ ತನ್ನೆಲ್ಲ ಶ್ರಮವನ್ನೆಲ್ಲ ವ್ಯಯಿಸಿ ಜೂನ್ ತಿಂಗಳಿನಿAದ ಡಿಸೆಂಬರ್ ತಿಂಗಳಿನವರೆಗೆ ತನ್ನ ಭೂಮಿಯಲ್ಲಿ ಭತ್ತದ ಕೃಷಿ ಚಟುವಟಿಕೆ ನಡೆಸುತ್ತಾನೆ. ಡಿಸೆಂಬರ್ ಹಾಗೂ ಜನವರಿ ಮೊದಲನೇ ವಾರದಲ್ಲಿ ತನ್ನ ಭತ್ತವನ್ನು ಕೊಯ್ಲು ಮಾಡಿ ಮನೆಗೆ ಕೊಂಡೊಯ್ಯುತ್ತಾನೆ. ಈ ವೇಳೆ ಭತ್ತದ ಗದ್ದೆಯಲ್ಲಿಯೇ ಒಣ ಹುಲ್ಲನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ಬಹುತೇಕ ರೈತರು ತಾನು ಬೆಳೆದ ಒಣ ಹುಲ್ಲನ್ನು ತನ್ನ ಮನೆಗೆ ಸಾಗಿಸಿ ಸಂದರ್ಭಕ್ಕನುಗುಣವಾಗಿ ಮಾರಾಟಕ್ಕೆ ಮುಂದಾಗುತ್ತಾರೆ. ಆದರೆ ಇತ್ತೀಚೆಗೆ ಕೊಡಗು ಜಿಲ್ಲೆಯ ಹಲವರು ಒಣ ಹುಲ್ಲು ಮಾರಾಟದಲ್ಲಿ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿ ಬೆಳೆದ ರೈತನಿಗೆ ಬೆಲೆ ಸಿಗದಂತೆ
(ಮೊದಲ ಪುಟದಿಂದ) ಮಾಡುತ್ತಿದ್ದಾರೆ ಎಂದು ಆಕ್ಷೇಪ ಕೇಳಿಬರುತ್ತಿದೆ.
ಕೊಡಗು ಜಿಲ್ಲೆಯಿಂದ ಒಣ ಹುಲ್ಲುಗಳು ಹೆಚ್ಚಾಗಿ ಕೇರಳ ರಾಜ್ಯಕ್ಕೆ ಸಾಗಾಟ ಮಾಡಲಾಗುತ್ತದೆ. ಕೇರಳ ರಾಜ್ಯದಲ್ಲಿ ಕೊಡಗಿನ ಒಣ ಹುಲ್ಲಿಗೆ ೩೬ರಿಂದ ೪೦ ರೂಪಾಯಿವರೆಗೆ ಒಂದು ಕಟ್ಟಿಗೆ ಬೆಲೆ ಸಿಗುತ್ತಿದೆ. ಆದರೆ ಇದೇ ಒಣ ಹುಲ್ಲಿನ ಒಂದು ಕಟ್ಟಿಗೆ ಕೊಡಗಿನ ರೈತರಿಂದ ೧೫ರಿಂದ ೧೮ ರೂಪಾಯಿವರೆಗೆ ಮಧ್ಯವರ್ತಿಗಳು ದರವನ್ನು ನಿಗಧಿ ಪಡಿಸುತ್ತಿದ್ದಾರೆ. ಕೇರಳದಿಂದ ಆಗಮಿಸುವ ವ್ಯಾಪಾರಸ್ಥರನ್ನು ರೈತರ ಬಳಿ ನೇರವಾಗಿ ಸಂಪರ್ಕಮಾಡಲು ಇಲ್ಲಿನ ಕೆಲವು ಮಧ್ಯವರ್ತಿಗಳು ಅವಕಾಶ ನೀಡುತ್ತಿಲ್ಲ. ಇಲ್ಲಿನ ರೈತರು ಮಧ್ಯವರ್ತಿಗಳ ಮೂಲಕವೇ ತಮ್ಮ ಗದ್ದೆ ಹಾಗೂ ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಒಣ ಹುಲ್ಲನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಧ್ಯವರ್ತಿಗಳು ನಿಗಧಿ ಪಡಿಸುವದರದಲ್ಲಿ ಒಣಹುಲ್ಲನ್ನು ರೈತ ನೀಡಬೇಕಾದ ದುಸ್ಥಿತಿ ಬಂದೊದಗಿದೆ. ಈ ಹಿಂದೆ ಕೇರಳ ರಾಜ್ಯದಿಂದ ವ್ಯಾಪಾರಸ್ಥರು ಕೊಡಗು ಜಿಲ್ಲೆಗೆ ಆಗಮಿಸಿ ಇಲ್ಲಿಯ ರೈತರಿಂದ ಒಣ ಹುಲ್ಲನ್ನು ನೇರವಾಗಿ ಖರೀದಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷದಲ್ಲಿ ಇಲ್ಲಿನ ಮಧ್ಯವರ್ತಿಗಳು ಕೇರಳ ರಾಜ್ಯದಿಂದ ಬರುವ ವ್ಯಾಪಾರಸ್ಥರನ್ನು ಬೆದರಿಸಿ ತಮ್ಮ ಮೂಲಕವೇ ಒಣ ಹುಲ್ಲು ಖರೀದಿಸುವಂತೆ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಇವರ ಭಯದಿಂದ ಕೇರಳ ರಾಜ್ಯದ ವ್ಯಾಪಾರಸ್ಥರು ಇಲ್ಲಿನ ಮಧ್ಯವರ್ತಿಗಳ ಮೂಲಕವೇ ವ್ಯಾಪಾರ ಆರಂಭಿಸಿದ್ದಾರೆ. ಹೀಗಾಗಿ ಇಲ್ಲಿನ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಪ್ರತಿ ಒಣಹುಲ್ಲಿನ ಕಂತೆಗೆ ಕೊಡಗಿನ ರೈತನಿಂದ ೧೫ ರಿಂದ ೧೮ ರೂ. ಗಳವರೆಗೆ ಖರೀದಿಸಿ, ಕೇರಳ ರಾಜ್ಯದ ವ್ಯಾಪಾರಸ್ಥನಿಗೆ ಮಧ್ಯವರ್ತಿಯು ೧೮ ರಿಂದ ೨೮ ರೂ. ಗಳ ತನಕ ದರ ನಿಗದಿ ಪಡಿಸುತ್ತಿದ್ದಾನೆ. ಈ ಒಣ ಹುಲ್ಲಿಗೆ ಕೇರಳ ರಾಜ್ಯದಲ್ಲಿ ಒಂದು ಕಂತೆಗೆ ೩೫ ರಿಂದ ೪೦ ರೂ.ಗಳ ವರೆಗೂ ಮಾರಾಟವಾಗುತ್ತಿದೆ. ಇದರಿಂದ ಮಧ್ಯವರ್ತಿಯು ಒಣ ಹುಲ್ಲಿನ ಮಾರಾಟ ಸಂದರ್ಭ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಕುಳಿತಲ್ಲಿಯೇ ಯಾವುದೇ ಬಂಡವಾಳ ಇಲ್ಲದೆ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಇಂತಹ ಮಧ್ಯವರ್ತಿಗಳಿಗೆ ಕಡಿವಾಣ ಹಾಕುವಂತೆ ಭತ್ತ ಬೆಳೆಯುವ ರೈತರು ಸಂಬAಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.