ಕೋವರ್ ಕೊಲ್ಲಿ ಇಂದ್ರೇಶ್

ಮಡಿಕೇರಿ, ಡಿ. ೩೦ : ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಕೊಡಗು ತನ್ನ ಪ್ರಾಕೃತಿಕ ಸೌಂದರ್ಯದಿAದ ದೇಶಾದ್ಯಂತ ಹೆಸರುವಾಸಿಯಾಗಿದೆ. ಆದರೆ ಈ ಪ್ರಕೃತಿ ಸೌಂದರ್ಯದ ನಡುವೆ ಸಾವಿರಾರು ಕಾಡು ಪ್ರಾಣಿಗಳೂ ಬದುಕುತ್ತಿವೆ. ಆದರೆ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಇತ್ತೀಚೆಗೆ ತಾರಕಕ್ಕೇರುತ್ತಿರುವುದು ಜನರಲ್ಲಿ ಭಯ ಮೂಡಿಸಿದೆ.

ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನಲ್ಲಿ ಮೂರು ವರ್ಷಗಳಿಂದ ಭೂ ಕುಸಿತ, ಪ್ರತಿಕೂಲ ಹವಾಮಾನ, ಉತ್ಪಾದನಾ ವೆಚ್ಚದಲ್ಲಿನ ಏರಿಕೆ ಮತ್ತು ಕೃಷಿ ಉತ್ಪನ್ನಗಳ ದರ ಕುಸಿತದಿಂದಾಗಿ ಕೃಷಿಕ ವರ್ಗ ಸಂಕಷ್ಟದಲ್ಲಿದೆ. ಮತ್ತೊಂದೆಡೆ ಕಾಡಾನೆಗಳು ಕೃಷಿ ಫಸಲನ್ನೂ, ಹುಲಿಗಳು ಜಾನುವಾರುಗಳನ್ನೂ ಕೆಲವೊಮ್ಮೆ ರೈತರ ಜೀವವನ್ನೇ ಬಲಿತೆಗೆದುಕೊಳ್ಳುತ್ತಿವೆ. ರಾಜ್ಯ ಸರ್ಕಾರ ಕಳೆದ ೨೦೨೦ ರ ಜನವರಿ ೧೩ ರಂದು ಆದೇಶವೊಂದನ್ನು ಹೊರಡಿಸಿ ವನ್ಯ ಪ್ರಾಣಿಗಳಿಂದ ಸಾವಿಗೀಡಾದ ಮೃತರ ಕುಟುಂಬಗಳಿಗೆ ನೀಡುವ ಪರಿಹಾರ ಧನದ ಮೊತ್ತವನ್ನು ೫ ಲಕ್ಷ ರೂಪಾಯಿಗಳಿಂದ ೭.೫ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಇದನ್ನು ೧೦ ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವಂತೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪರಿಹಾರ ಧನ ಏರಿಕೆಯಾದ ಬೆನ್ನಲ್ಲೇ ಮಾನವ ಜೀವ ಹಾನಿ ಪ್ರಕರಣಗಳ ಏರಿಕೆ ದಿಗಿಲು ಹುಟ್ಟಿಸುತ್ತಿದೆ.

ಕಳೆದ ೫ ವರ್ಷಗಳಿಗೆ ಹೋಲಿಸಿದರೆ ೨೦೨೧-೨೨ ನೇ ಸಾಲಿನ ಮೊದಲ ೯ ತಿಂಗಳಿನಲ್ಲೇ ಕಾಡಾನೆ ಮತ್ತು ಹುಲಿ ಧಾಳಿಗೆ ಬಲಿಯಾದವರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿಕೆ ಆಗಿದೆ. ೨೦೧೭-೧೮ ರಲ್ಲಿ ಕೊಡಗಿನಲ್ಲಿ ಕಾಡು ಪ್ರಾಣಿಗಳಿಂದ ಜೀವ ಕಳೆದುಕೊಂಡವರ ಸಂಖ್ಯೆ ೧೧ ಆಗಿತ್ತು. ೧೮-೧೯ ರಲ್ಲಿ ಯಾವುದೇ ಪ್ರಾಣಹಾನಿ ಆಗಿರಲಿಲ್ಲ. ೨೦೧೯-೨೦ ರಲ್ಲಿ ೨ ಪ್ರಕರಣ ವರದಿ ಆಗಿತ್ತು. ೨೦-೨೧ ರಲ್ಲಿಯೂ ೨ ಸಾವು ಸಂಭವಿಸಿತ್ತು. ಆದರೆ ೨೦೨೧-೨೨ ನೇ ಸಾಲಿನಲ್ಲಿ ಬರೋಬ್ಬರಿ ೧೨ ಜನರು ವನ್ಯಪ್ರಾಣಿಗಳ ದಾಳಿಯಿಂದ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲೇ ಜೀವಹಾನಿ ಅಧಿಕವಾಗಿದೆ. ಈ ೧೨ ಪ್ರಕರಣಗಳಲ್ಲಿ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ೫, ವೀರಾಜಪೇಟೆ ಅರಣ್ಯ ವಿಭಾಗದಲ್ಲಿ ೫ ಮತ್ತು ಮಡಿಕೇರಿ ಅರಣ್ಯ ವಿಭಾಗದಲ್ಲಿ ೨ ಸಾವು ಸಂಭವಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಾಡು ಪ್ರಾಣಿಗಳಿಂದ ಒಟ್ಟು ೩೧ ಜನರು ಗಾಯಗೊಂಡಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಗಾಯಗೊಂಡವರಿಗೆ ಮಾಸಾಸನ ದೊರೆತ್ತಿಲ್ಲ. ಆದರೆ ೨೦೨೧ ರ ಆರ್ಥಿಕ ವರ್ಷದ ಮೊದಲ ೯ ತಿಂಗಳಿನಲ್ಲಿ ೧೪ ಜನರಿಗೆ ಮಾಸಾಸನ ನೀಡಲಾಗುತ್ತಿದೆ. ೨೦೧೯-೨೦ ನೇ ಸಾಲಿನಲ್ಲಿ ಕಾಡು ಪ್ರಾಣಿಗಳಿಂದ ಆಸ್ತಿ ನಷ್ಟ ಪ್ರಕರಣಗಳು ೭೮ ಆಗಿದ್ದು , ೧೬೦ ಸಾಕು ಪ್ರಾಣಿಗಳು ದಾಳಿಗೆ ತುತ್ತಾಗಿವೆ. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ೪೧೪೩ ಕೃಷಿ ನಷ್ಟ ಪ್ರಕರಣಗಳು ವರದಿ ಆಗಿವೆ.

೨೦೨೦-೨೧ ನೇ ಸಾಲಿನಲ್ಲಿ ಕಾಡು ಪ್ರಾಣಿಗಳಿಂದ ಆಸ್ತಿ ನಷ್ಟ ಪ್ರಕರಣಗಳು ೮೩ ಆಗಿದ್ದು ಈ ವರ್ಷದ ಮೊದಲ ೯ ತಿಂಗಳಿನಲ್ಲಿ ಇದು ೧೪೦ ಕ್ಕೆ ಏರಿಕೆಯಾಗಿದೆ. ಈ ವರ್ಷದ ೯ ತಿಂಗಳಿನಲ್ಲಿ ೮೨ ಸಾಕು ಪ್ರಾಣಿಗಳು ಕಾಡು ಮೃಗಗಳಿಂದ ಸಾವನ್ನಪ್ಪಿವೆ. ಕಳೆದ ವರ್ಷ ಇದು ೫೫ ಆಗಿತ್ತು. ಇನ್ನು ಕೃಷಿ ನಷ್ಟ ಪ್ರಕರಣಗಳು ಈ ೯ ತಿಂಗಳಿನಲ್ಲಿ ಒಟ್ಟು ೩೫೪೯ ವರದಿ ಆಗಿದ್ದು ಕಳೆದ ಸಾಲಿನಲ್ಲಿ ೪೯೬೩ ಮತ್ತು ೨೦೧೯-೨೦ ನೇ ಸಾಲಿನಲ್ಲಿ ೪೧೪೩ ಪ್ರಕರಣಗಳು ದಾಖಲಾಗಿವೆ.

ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಂದ ಆಗಿರುವ ನಷ್ಟಕ್ಕೆ ೨೦೧೯-೨೦ ರಲ್ಲಿ ಒಟ್ಟು ೨.೯೩ ಕೋಟಿ ರೂಪಾಯಿ

(ಮೊದಲ ಪುಟದಿಂದ) ಪರಿಹಾರ ವಿತರಿಸಿದ್ದು, ೨೦೨೦-೨೧ ರಲ್ಲಿ ೩.೫೬ ಕೋಟಿ ರೂಪಾಯಿಗಳನ್ನೂ ಈ ವರ್ಷದ ಮೊದಲ ೯ ತಿಂಗಳಿನಲ್ಲೇ ೩.೯೪ ಕೋಟಿ ರೂಪಾಯಿ ಪರಿಹಾರ ಮೊತ್ತ ವಿತರಿಸಲಾಗಿದೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಜಿಲ್ಲೆಯ ಗಡಿಯಲ್ಲಿ ಇರುವುದೇ ಕೊಡಗಿನಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ನಿಸ್ಸಂದೇಹವಾಗಿದೆ. ಮಾನವನಿಗೆ ಹೆಚ್ಚು ಉಪಟಳ ನೀಡುತ್ತಿರುವ ಕಾಡಾನೆ ಮತ್ತು ಹುಲಿಗಳ ಸಂಖ್ಯೆಯೂ ಈ ಉದ್ಯಾನವನದಲ್ಲಿ ಅತೀ ಹೆಚ್ಚಾಗಿದೆ. ಕರ್ನಾಟಕದಲ್ಲಿ ೬೦೦೦-೬೫೦೦ ಆನೆಗಳಿರಬಹುದೆಂದು ಅಂದಾಜಿಸಿದ್ದು ಇದು ದೇಶದಲ್ಲೇ ಅತ್ಯಧಿಕ ಆನೆ ಹೊಂದಿರುವ ರಾಜ್ಯವೂ ಆಗಿದೆ. ಜೊತೆಗೆ ಈ ಕಾಡಾನೆ ಸಂಖ್ಯೆಯ ಶೇಕಡಾ ೫೦ ರಷ್ಟು ಆನೆಗಳು ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಗಳಲ್ಲಿವೆ. ಕೊಡಗಿನಲ್ಲಿ ೧೬೦೦ ರಿಂದ ೧೮೦೦ ಆನೆಗಳಿರಬಹುದೆಂದು ಅಂದಾಜಿಸಲಾಗಿದ್ದು ಇದರಲ್ಲಿ ನಾಗರಹೊಳೆಯಲ್ಲಿಯೇ ೧೪೦೦ ಆನೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇನ್ನು ಹುಲಿಗಳ ಸಂಖ್ಯೆಗೆ ಹೋಲಿಸಿದರೆ ನಾಗರಹೊಳೆ ಅಭಯಾರಣ್ಯವು ದೇಶದಲ್ಲೇ ಮೂರನೇ ಅತೀ ಹೆಚ್ಚು ಹುಲಿಗಳ ಸಾಂದ್ರತೆಯನ್ನು ಹೊಂದಿದೆ. ದೇಶದಲ್ಲಿ ಉತ್ತರ ಪ್ರದೇಶದ ಜಿಮ್ ಕಾರ್ಬೆಟ್ ರಾಷ್ಟಿçÃಯ ಉದ್ಯಾನವನವು ಅತ್ಯಂತ ಹೆಚ್ಚಿನ ಹುಲಿ ಸಾಂದ್ರತೆಯನ್ನು ಹೊಂದಿದ್ದು ಇಲ್ಲಿ ಪ್ರತೀ ೧೦೦ ಚದರ ಕಿಲೋಮೀಟರ್ ಅರಣ್ಯದಲ್ಲಿ ೧೪ ಹುಲಿಗಳಿವೆ. ಅಸ್ಸಾಂ ರಾಜ್ಯದ ಕಾಜೀರಂಗ ರಾಷ್ಟಿçÃಯ ಉದ್ಯಾನವನವು ನೂರು ಚದರ ಕಿಮಿಗೆ ೧೩ ಹುಲಿಗಳನ್ನು ಹೊಂದಿದ್ದು ಎರಡನೇ ಸ್ಥಾನದಲ್ಲೂ, ನಾಗರಹೊಳೆ ಉದ್ಯಾನವನವು ೧೨ ಹುಲಿಗಳನ್ನು ಹೊಂದಿದ್ದು ಮೂರನೇ ಸ್ಥಾನದಲ್ಲೂ ಇದೆ.

ಇಷ್ಟೊಂದು ಅಗಾಧ ವನ್ಯ ಜೀವಿ ಸಂಪತ್ತು ಪುಟ್ಟ ಜಿಲ್ಲೆಯಲ್ಲಿರುವುದು ಹೆಮ್ಮೆ ತರಿಸಿದರೂ ಕೃಷಿಕರಿಗೆ ನೀಡುವ ಉಪಟಳ ಕಣ್ಣೀರು ತರಿಸುತ್ತದೆ. ಈ ಕುರಿತು ನಾಗರಹೊಳೆ ಉದ್ಯಾನವನದ ನಿರ್ದೇಶಕ ಡಿ. ಮಹೇಶ್ ಕುಮಾರ್ ಅವರನ್ನು ಮಾತಾಡಿಸಿದಾಗ ಹಿಂದಿನ ೧೦ ವರ್ಷಗಳಿಗೆ ಹೋಲಿಸಿದರೆ ಕಾಡಾನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಅದು ಸ್ಥಿರವಾಗಿದೆ. ಆದರೆ ಕಾಡಾನೆಗಳು ಒಂದು ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಹೋಗುವ ಹಾದಿಯಲ್ಲಿ ಕೃಷಿ, ಕಟ್ಟಡ ನಿರ್ಮಾಣ ,ಇತ್ಯಾದಿ ಬದಲಾವಣೆ ಆಗಿದ್ದು ಇದರಿಂದ ಕೃಷಿ ಜಮೀನುಗಳಿಗೆ ಹಾನಿ ಆಗುತ್ತಿದೆ ಎಂದರು. ಕಾಡಾನೆ ಹಾವಳಿಗೆ ಈಗಾಗಲೇ ಶ್ರೀಲಂಕಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಈಗಾಗಲೇ ರೈಲ್ವೇ ಬ್ಯಾರಿಕೇಡ್ ಗಳನ್ನು ಅಳವಡಿಸಿ ಯಶಸ್ವಿ ಆಗಿದ್ದು ಜಿಲ್ಲೆಯಲ್ಲೂ ಅಳವಡಿಸಿದರೆ ಹಾವಳಿ ಕಡಿಮೆ ಆಗಲಿದೆ ಎಂದರು.

ಆದರೆ ಬ್ಯಾರಿಕೇಡ್ ಅಳವಡಿಸಲು ಕಿಲೋಮೀಟರ್ ಗೆ ೧ ರಿಂದ ೧.೫ ಕೋಟಿ ರೂಪಾಯಿಯಷ್ಟು ದುಬಾರಿ ವೆಚ್ಚ ಆಗುತಿದ್ದು ಸರ್ಕಾರದಲ್ಲಿ ಹಣಕಾಸಿನ ಕೊರತೆ ಇರುವುದರಿಂದ ಎಲ್ಲೆಡೆ ಅಳವಡಿಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.