ಸೋಮವಾರಪೇಟೆ, ಡಿ. ೨೯: ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಮುಂಚಿತವಾಗಿಯೇ ತಡೆಗಟ್ಟುವಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಡಿವೈಎಸ್‌ಪಿ ಶೈಲೇಂದ್ರ ತಿಳಿಸಿದರು.

ಇಲ್ಲಿನ ಪೊಲೀಸ್ ಠಾಣಾ ವತಿಯಿಂದ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ ಸ್ಥಾಪನೆಯೊಂದಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಇಲಾಖೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ವಾಹನ ಚಾಲನೆ ಸಂದರ್ಭ ಅಗತ್ಯ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಾಲಿಸಬಾರದು. ವಾಹನಗಳಿಗೆ ವಿಮೆ ಮಾಡಿಸಿರಬೇಕು. ಸರ್ಕಾರ ಸೂಚಿಸಿರುವ ಸಮವಸ್ತçವನ್ನು ಕಡ್ಡಾಯವಾಗಿ ಧರಿಸಬೇಕು. ತಮ್ಮ ವೃತ್ತಿಯನ್ನು ಗೌರವಿಸಬೇಕು ಎಂದು ಶೈಲೇಂದ್ರ ಅವರು ಸಲಹೆ ನೀಡಿದರು.

ಸಭೆಯಲ್ಲಿ ಭಾಗಿಯಾಗಿದ್ದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಮಾತನಾಡಿ, ಆಟೋ ಚಾಲಕರು ಈ ಹಿಂದಿನಿAದಲೂ ಇಲಾಖೆಯೊಂದಿಗೆ ಸಹಕರಿಸುತ್ತಿದ್ದಾರೆ. ಸೋಮವಾರಪೇಟೆಯಲ್ಲಿ ಸಂತೆ ದಿನವಾದ ಸೋಮವಾರದಂದು ಖಾಸಗಿ ವಾಹನಗಳಲ್ಲಿ ಬಾಡಿಗೆ ತೆರಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಈಗಾಗಲೇ ಆಟೋ ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು, ಖಾಸಗಿ ವಾಹನಗಳು ಬಾಡಿಗೆ ಮಾಡುವುದರಿಂದ ಇನ್ನಷ್ಟು ತೊಂದರೆಗೆ ಸಿಲುಕುವಂತಾಗಿದೆ ಈ ಬಗ್ಗೆ ಇಲಾಖೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಪೊಲೀಸ್ ವೃತ್ತನಿರೀಕ್ಷಕ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್ ಅವರುಗಳು ಅಪರಾಧ ತಡೆ ಮಾಸಾಚರಣೆ ಬಗ್ಗೆ ಮಾತನಾಡಿದರು. ಪೊಲೀಸ್ ಸಿಬ್ಬಂದಿಗಳು, ಆಟೋ ಚಾಲಕರುಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.