ಶನಿವಾರಸಂತೆ, ಡಿ. ೨೯: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ೪ ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಬುಧವಾರ ಬೆಳಿಗ್ಗೆ ತೋಟವೊಂದರಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೊಡ್ಲಿಪೇಟೆಯ ಬೆಳೆಗಾರ ಕೆ.ಎಸ್. ಸದಾಶಿವ ಆಚಾರ್ಯ ಕಾಣೆಯಾಗಿದ್ದ ವ್ಯಕ್ತಿ. ಇವರು ಪುತ್ರ ಕೆ.ಎಸ್. ನಾಗೇಶ್ ಜೊತೆ ವಾಸವಿದ್ದು, ಆಚಾರಿ ಕೆಲಸ ನಿರ್ವಹಿಸುತ್ತಿದ್ದರು. ತಾ. ೨೫ರಂದು ಮನೆಯಿಂದ ಹೊರ ಹೋದವರು ಮನೆಗೆ ಮರಳಿ ಬಂದಿರಲಿಲ್ಲ. ಅಕ್ಕಪಕ್ಕದ ಮನೆಯವರನ್ನು, ಬಂಧುಗಳನ್ನು ಹಾಗೂ ಸ್ನೇಹಿತರನ್ನು ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ ಎನ್ನಲಾಗಿದೆ.

ಪುತ್ರ ನಾಗೇಶ್ ತಾ. ೨೮ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಬುಧವಾರ ಪಕ್ಕದ ಮನೆಯ ಸಂದೀಪ್ ದೂರವಾಣಿ ಕರೆ ಮಾಡಿ ದೊಡ್ಡಕುಂದ ಗ್ರಾಮದ ಮಂಜಣ್ಣ ಅವರ ಕಾಫಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಇರುವ ಬಗ್ಗೆ ತಿಳಿಸಿದ್ದಾರೆ.

ತಿಂಗಳ ಹಿಂದೆ ತನ್ನ ತಾಯಿಯೂ ತೀರಿಹೋಗಿದ್ದು, ತಂದೆ ಖಿನ್ನತೆಗೆ ಒಳಗಾಗಿದ್ದರು. ಆರೋಗ್ಯವೂ ಸರಿಯಿಲ್ಲದೆ ಕಾರಣ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪುತ್ರ ನಾಗೇಶ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.