ಮಡಿಕೇರಿ, ಡಿ. ೨೯: ಆಕೆ ಮುತ್ತಮ್ಮ ತಮಿಳುನಾಡಿನ ಕೃಷ್ಣಗಿರಿಯ ಡಿಗ್ನಿಕೋಟೆಯ ನಿವಾಸಿ. ಮಾನಸಿಕವಾಗಿ ಕೊಂಚ ಅನಾರೋಗ್ಯವನ್ನು ಹೊಂದಿದ್ದ ಇವರನ್ನು ಕುಟುಂಬದವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲೆಂದು ಕರೆತಂದಿದ್ದರು. ಚಿಕಿತ್ಸೆಯ ನಂತರ ಮನೆಗೆ ಕರೆದೊಯ್ಯುವ ವೇಳೆಗೆ ಇವರು ತಪ್ಪಿಸಿಕೊಂಡಿದ್ದರು.

ಮಹಾನಗರ ಬೆಂಗಳೂರೆAದರೆ ಜನರು ಕೊಂಚ ವಿಚಲಿತರಾಗುವುದು ನಿಶ್ಚಿತ. ಇಂತಹ ಮಹಾನಗರದಲ್ಲಿ ಸಂಪೂರ್ಣ ಬುದ್ಧಿಶಕ್ತಿ ಹೊಂದಿರುವವರೇ ಹಾದಿ ತಪ್ಪಿದರೆ ಕಕ್ಕಾಬಿಕ್ಕಿಯಾಗಿಬಿಡುತ್ತಾರೆ. ಅಂತಹ ಸ್ಥಳದಲ್ಲಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡವರೊಬ್ಬರು ದಾರಿತಪ್ಪಿದರೆ ಅವರನ್ನು ಹುಡುಕುವುದು ಬಹಳ ಕಷ್ಟ. ಮುತ್ತಮ್ಮನವರದು ಕೂಡ ಇದೇ ಕಥೆ. ಆಸ್ಪತ್ರೆಗೆಂದು ಬಂದವರು ಕುಟುಂಬದವರಿAದ ತಪ್ಪಿಸಿಕೊಂಡಿದ್ದರು. ಕುಟುಂಬಸ್ಥರು ಹುಡುಕಾಡಿ ಸೋತು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮುತ್ತಮ್ಮರ ವಿವರಗಳನ್ನೊಳಗೊಂಡAತೆ ಕಾಣೆಯಾಗಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ. ಆನಂತರ ಸತತ ಆರೇಳು ತಿಂಗಳು ಹುಡುಕಾಡಿದರೂ ಫಲ ಸಿಕ್ಕಿರಲಿಲ್ಲ. ೨೦೧೪ ರಲ್ಲಿ ಸಂಸಾರದಿAದ ದೂರವಾದ ಇವರು ಅದು ಹೇಗೋ, ಏನೋ ಮಡಿಕೇರಿ ತಲುಪಿದ್ದಾರೆ.

೨೦೧೭ರ ದಿನಾಂಕ ೫/೧೨/೨೦೧೭ ರಂದು ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ. ಡಿಪೋದ ಬಳಿಯ ಎಪಿಎಂಸಿ ಆವರಣದಲ್ಲಿ ಓರ್ವ ಮಹಿಳೆ ಅಸ್ವಸ್ಥರಾಗಿ ಕಸದ ತೊಟ್ಟಿಯ ಪಕ್ಕದಲ್ಲಿ ಬಿದ್ದಿದ್ದರು. ಮಾಹಿತಿ ದೊರೆತ ಸ್ಥಳೀಯ ಸಮಾಜ ಸೇವಕರಾದ ತನಲ್ ಸಂಸ್ಥೆಯ ಮುಖ್ಯಸ್ಥರಾದ ಮೊಹಮ್ಮದ್ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇವರ ಒಂದು ಕಾಲಿನ ಪಾದದ ಮುಂಭಾಗ ಬೆರಳುಗಳೇ ಇರಲಿಲ್ಲ, ನೊಣಗಳು ಮುತ್ತಿಕೊಂಡಿದ್ದವು, ನೋವಿನಿಂದ ನರಳುತ್ತಿದ್ದರು.

ಮಾತನಾಡಿಸಿದರೆ ಮಾತನಾಡುತ್ತಿರಲಿಲ್ಲ. ಬಳಿಕ ಆ ಮಹಿಳೆಯನ್ನು ಸ್ಥಳದಿಂದ ಮಡಿಕೇರಿಯ ತನಲ್ ಆಶ್ರಮಕ್ಕೆ ಸೇರಿಸಿದರು. ಅಂದು ಇವರ ಕೊಳೆತ ಕಾಲಿನ ಸ್ಥಿತಿ ನೋಡಿದ ಒಂದಷ್ಟು ಜನರು ಇವರು ಬದುಕುವುದಿಲ್ಲ ಎಂದುಕೊAಡಿದ್ದರು. ನೋಡುಗರಿಗೆ ತಲೆಸುತ್ತುವಂತಿತ್ತು ಕಾಲಿನ ಸ್ಥಿತಿ..!

ಕೇರಳದಲ್ಲಿ ಚಿಕಿತ್ಸೆ

ಕೆಲದಿನಗಳ ಪ್ರಥಮ ಚಿಕಿತ್ಸೆಯ ಬಳಿಕ ಮುತ್ತಮ್ಮ ಅವರನ್ನು ಹಿಲ್ ಟೌನ್ ಹೊಟೇಲ್ ಮಾಲೀಕ ನಜೀರ್ ಅವರ ಸಹಾಯದಿಂದ ಕೇರಳದಲ್ಲಿರುವ ತನಲ್‌ನ ಮಾತೃ ಸಂಸ್ಥೆಗೆ ದಾಖಲು ಮಾಡಿ ಸತತ ಆರು ತಿಂಗಳ ಪರಿಶ್ರಮದಿಂದ ಸೂಕ್ತ ಚಿಕಿತ್ಸೆಯೊಡನೆ ಅವರ ಕಾಲಿನ ನೋವನ್ನು ನಿವಾರಿಸಿದ ಬಳಿಕ ಹಿಂತಿರುಗಿ ಮಡಿಕೇರಿಯ ತನಲ್ ಆಶ್ರಮಕ್ಕೆ ಕರೆತಂದರು.

ಸ್ವಲ್ಪ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರಿಂದ ಇವರು ಸರಿಯಾದ ವಿಳಾಸವನ್ನು ಹೇಳುತ್ತಿರಲಿಲ್ಲ. ಆಕೆಯ ಹೆಸರನ್ನು ಮುತ್ತುಲಕ್ಷಿö್ಮ ಎನ್ನುತ್ತಿದ್ದರು ಹಾಗೂ ಹೊಸೂರು ಎನ್ನುವ ಹೆಸರನ್ನು ಅಸ್ಪಷ್ಟವಾಗಿ ಹೇಳುತ್ತಿದ್ದರು. ಸತತ ಎರಡು ವರ್ಷಗಳ ಎಡೆಬಿಡದ ಪ್ರಯತ್ನದಲ್ಲಿ ಸ್ವಲ್ಪ ಅಲ್ಪವೇ ಗೆಲುವನ್ನು ಸಾಧಿಸುತ್ತಾ ಬಂದ ಮೊಹಮ್ಮದ್, ವಿನು ಹಾಗೂ ಇನ್ನಿತರರ ಶ್ರಮಕ್ಕೆ ಕೋವಿಡ್ ತಣ್ಣೀರೆರಚಿತು. ಇನ್ನೇನು ಈಕೆಯ ವಿಳಾಸವನ್ನು ಪತ್ತೆ ಮಾಡಿದರೆನ್ನುವಾಗ ಕೋವಿಡ್ ಅವತರಿಸಿ ಎಲ್ಲವನ್ನೂ ಮೊದಲಿನ ಹಂತಕ್ಕೆ ತಂದುಬಿಟ್ಟಿತು.

ಸ್ಪಂದಿಸಿದ ನ್ಯಾಯಮೂರ್ತಿಗಳು

ಆನಂತರ ಕೋವಿಡ್ ನಿಯಂತ್ರಣಕ್ಕೆ ಬಂದಾಗ ತನಲ್ ಆಶ್ರಮಕ್ಕೆ ಭೇಟಿ ನೀಡಿದ ನ್ಯಾಯಾಧೀಶರಾದ ಸುಬ್ರಮಣ್ಯ ಅವರಲ್ಲಿ ಈಕೆಯ ವಿಚಾರವನ್ನು ಪ್ರಸ್ತಾಪಿಸಿದಾಗ ತಕ್ಷಣವೇ ಸ್ಪಂದಿಸಿದ ನ್ಯಾಯಾಧೀಶರು ಸೂಕ್ತ ಸಲಹೆ ನೀಡಿ ಡಿ.ವೈ.ಎಸ್.ಪಿ. ಗಜೇಂದ್ರ ಪ್ರಸಾದ್ ಅವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಗಜೇಂದ್ರ ಪ್ರಸಾದ್ ಅವರು ಇಲಾಖೆಯ ಮುಖಾಂತರ ಪರಿಶೀಲಿಸಿ ಈ ಹಿಂದೆ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಮೂಲವನ್ನು ಕೆದಕಿ ಮುತ್ತಮ್ಮರ ವಿಳಾಸವನ್ನು ಪತ್ತೆಹಚ್ಚಿ ತನಲ್ ಬಳಗಕ್ಕೆ ತಿಳಿಸಿದ್ದಾರೆ.

ವಿಳಾಸ ದೊರೆತ ಬಳಿಕ ಕುಟುಂಬವನ್ನು ಸಂಪರ್ಕಿಸಿದ ಮೊಹಮ್ಮದ್ ಅವರು ಕುಟುಂಬಸ್ಥರಿಗೆ ವಿಷಯವನ್ನು ತಿಳಿಸಿದ್ದಾರೆ. ನಾಪತ್ತೆಯಾಗಿದ್ದ ಹೆಂಡತಿ ಮತ್ತೆ ದೊರೆತ ವಿಷಯ ತಿಳಿದ ಕೂಡಲೇ ಹೇಗಿದ್ದರೋ ಹಾಗೆಯೇ ೩೦೦ ಕಿಲೋಮೀಟರ್‌ಗೂ ಹೆಚ್ಚು ದೂರದಿಂದ ಗಂಡ ರಾಜಪ್ಪ, ಅಳಿಯ ದೊರೆ ಹಾಗೂ ಮತ್ತೋರ್ವ ಅಳಿಯ ನಾಗರಾಜ್ ಧಾವಿಸಿ ಬಂದಿದ್ದಾರೆ. ನಡುರಾತ್ರಿ ಹನ್ನೊಂದು ಗಂಟೆಗೆ ಮಡಿಕೇರಿಯ ತನಲ್ ತಲುಪಿದ ಅಳಿಯಂದಿರ ಕಂಗಳಲಿ ತಾಯೊಬ್ಬಳು ಮರಳಿ ದೊರೆತಂತ ಭಾವವಾದರೆ, ಗಂಡ ರಾಜಪ್ಪನವರ ಮುಖದಲ್ಲಿ ಮಂದಹಾಸ ಲಾಸ್ಯವಾಡುತ್ತಿತ್ತು.

ಯಾರಾದರೂ ಸರಿಯೇ ಬಹಳ ವರ್ಷದಿಂದ ಕಾಣದೇ ಇರುವವರು ಕಂಡಾಗ ಸಂತೋಷವಾಗುವುದು ಸಹಜ. ಅದೇ ರೀತಿ ಇವರ ಕಂಗಳಲ್ಲೂ ಆನಂದದ ನೀರು ಜಿನುಗಿತ್ತು.

ನಮ್ಮೋರು ಬಂದವ್ರೆ-ಹೋಗ್ತಿನಿ

೨೬/೧೨/೨೦೨೧ ರಾಜಪ್ಪನವರ ಕುಟುಂಬಕ್ಕೆ ಅತ್ಯಂತ ಮಹತ್ವದ ದಿನವಾಯಿತು. ಕಳೆದುಹೋದ ಪತ್ನಿ ಮರಳಿ ಸಿಕ್ಕ ಕುಶಿ ಅವರಲ್ಲಿ ಮನೆ ಮಾಡಿತ್ತು.

ಕುಟುಂಬ ಸಿಕ್ಕ ಆನಂದದಲ್ಲಿ ಬೇಗಬೇಗನೆ ಬಟ್ಟೆಬರೆ ಜೋಡಿಸಿಕೊಂಡ ಮುತ್ತಮ್ಮಳನ್ನು ದೂರ ಹೊರಟಿದ್ದು ಎಂದು ಕೇಳಿದರೆ ‘ನಮ್ಮೋರು ಬಂದವ್ರೆ, ನಮ್ಮೂರಿಗೆ ಕರ್ಕೊಂಡೋಗ್ತಾರೆ. ನಾನು ಹೋಗ್ತೀನಿ’ ಎಂದು ಮಗುವಿನಂತೆ ಪಿಸುನುಡಿಯುತ್ತಾರೆ.

ಕೊನೆಗೆ ಆಶ್ರಮದಿಂದ ಹೊರಡುವಾಗ ಊಟ ಉಪಚಾರವಿತ್ತು ಸಲಹಿದವರಿಗೆ, ಜೊತೆಗಿದ್ದು ಧೈರ್ಯ ನೀಡಿದವರಿಗೆ, ಗುಣಮುಖಳಾಗಲು ನೆರವು ನೀಡಿದವರಿಗೆ ಎಲ್ಲರಿಗೂ ನಮಸ್ಕರಿಸಿದ ಆ ತಾಯಿ. ಕೊನೆಗೊಮ್ಮೆ ದೀರ್ಘವಾಗಿ ತನಲ್ ಅನ್ನು ದಿಟ್ಟಿಸಿ ಎಲ್ಲರಿಗೂ ಕೈ ಬೀಸಿ ತನ್ನವರೊಂದಿಗೆ ತನ್ನೂರಿಗೆ ಹೊರಟು ನಿಂತರೆ, ತನಲ್‌ನ ಸಿಬ್ಬಂದಿ ಕಣ್ಣೀರಾಗಿದ್ದರು.

ತನಲ್ ಅನ್ನು ತೊರೆದು ವಿದಾಯ ಹೇಳಿ ಹೋದ ಮುತ್ತಮ್ಮಳ ನಗು ಸಾಕೆನ್ನುವ ತನಲ್ ಮುಖ್ಯಸ್ಥ ಮಹಮ್ಮದ್ ಹಾಗೂ ಸಿಬ್ಬಂದಿಗಳ ಮುಖದಲ್ಲಿನ ನೆಮ್ಮದಿಯ ಮಂದಹಾಸ ಸಂಜೆಯ ಇಳಿಬಿಸಿಲ ಸೌಂದರ್ಯಕ್ಕೆ ಸವಾಲೊಡ್ಡುತ್ತಿತ್ತು.

ತನಲ್ ಇರುವುದೇ ಅಸಹಾಯಕರಿಗೆ ನೆರವಾಗಲು, ನೆರಳು ನೀಡುವುದು ನಮ್ಮ ಉದ್ದೇಶ. ಇದಕ್ಕೆ ನೆರವಾಗುವವರಿಗೆಲ್ಲ ನಾನು ಚಿರ ಋಣಿ ಎನ್ನುವ ಆಶ್ರಮದ ಮುಖ್ಯಸ್ಥರ ಮಾತು ಕಿವಿಗಪ್ಪಳಿಸುತ್ತಿದ್ದರೆ ಅಲ್ಲಿಯೇ ಹಿರಿಯ ಜೀವಗಳೊಡನೆ ದಿವ್ಯಾ ಹಾಗೂ ಐಶ್ವರ್ಯ ಎನ್ನುವ ಪುಟ್ಟ ಮಕ್ಕಳಿಬ್ಬರು ತಮ್ಮದೇ ಮನೆಯ ಬಂಧುಗಳೇನೋ ಎಂಬAತೆ ಮಾತನಾಡುತ್ತಾ ಭವಿಷ್ಯದ ಉತ್ತಮ ಪ್ರಜೆಗಳಾಗುವೆವೆಂಬ ಸಂದೇಶವನ್ನು ನೀಡುವಂತಿತ್ತು ತನಲ್‌ನ ನೆರಳಿನ ಮನೆಯ ಆವರಣ.

-ಚಂದನ್ ನಂದರಬೆಟ್ಟು