ಮಡಿಕೇರಿ, ಡಿ. ೨೯: ಕರ್ಣಂಗೇರಿಯ ನಿಸರ್ಗ ಬಡಾವಣೆಯ ನಿವಾಸಿಗಳ ವತಿಯಿಂದ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮಕ್ಕೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಬಡಾವಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರದಾಶ್ರಮದ ಅಧ್ಯಕ್ಷರಾದ ಅಮೂರ್ತಾನಂದ ಮಹಾರಾಜ್ ಹಾಗೂ ವ್ಯವಸ್ಥಾಪಕರಾದ ಪರಹಿತಾನಂದ ಮಹಾರಾಜ್ ಅವರಿಗೆ ದೀಪ ನೀಡಿ, ಫಲ ತಾಂಬೂಲವಿತ್ತು ಗೌರವ ವಂದನೆ ಸಮರ್ಪಿಸಿದರು.

೨೦೧೮ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಉದಯಗಿರಿ ಭಾಗದ ಸಂತ್ರಸ್ತರಿಗೆ ಕರ್ಣಂಗೇರಿಯಲ್ಲಿ ಸರ್ಕಾರ ೨೫ ಮನೆ ನಿರ್ಮಿಸಿಕೊಟ್ಟಿತ್ತು. ಅಲ್ಲಿನ ಪ್ರತಿ ಕುಟುಂಬಕ್ಕೆ ರಾಮಕೃಷ್ಣ ಶಾರದಾಶ್ರಮ ವತಿಯಿಂದ ಸೋಲಾರ್ ವಾಟರ್ ಹೀಟರ್, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಧನ್ಯವಾದ ಸಲ್ಲಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಮೂರ್ತಾನಂದ ಮಹಾರಾಜ್, ಸ್ವಾಮಿ ವಿವೇಕಾನಂದ ಹಾಗೂ ರಾಮೃಕೃಷ್ಣ ಪರಮಹಂಸರ ಆಶಯದಂತೆ ಶಾರದಾಶ್ರಮ ಕಾರ್ಯನಿರ್ವಹಿಸುತ್ತಿದೆ. ವಿವೇಕಾನಂದರ ಶಕ್ತಿಯಿಂದಾಗಿ ಆಶ್ರಮದ ವತಿಯಿಂದ

(ಮೊದಲ ಪುಟದಿಂದ) ಸೇವಾ ಕಾರ್ಯ ನಡೆಯುತ್ತಿದೆ ಎಂದರು. ಆಶ್ರಮದ ಸ್ವಾಮೀಜಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಅಂತ ಜನ ಅಂದುಕೊಳ್ಳುತ್ತಾರೆ. ಆದರೆ ಸಮಾಜದ ಪ್ರತಿಯೊಂದು ಸಮಸ್ಯೆ ಕೂಡಾ ನಮಗೆ ಸಂಬAಧಿಸಿದ್ದು. ಸಮಸ್ಯೆಯಲ್ಲಿದ್ದವರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಾರದಾದೇವಿ ಅವರ ಜೀವನವನ್ನು ಅಧ್ಯಯನ ಮಾಡಿದಾಗ ಸೇವೆಯೆಂದರೆ ಏನೆಂಬುದು ಅರಿವಾಗುತ್ತದೆ. ಲೋಕದ ಜ್ಞಾನ ಮೂಡಲು ಸಹಕಾರಿಯಾಗುತ್ತದೆ ಎಂದು ವ್ಯಾಖ್ಯಾನಿಸಿದರು.

ವ್ಯವಸ್ಥಾಪಕರಾದ ಪರಹಿತಾನಂದ ಮಹಾರಾಜ್ ಮಾತನಾಡಿ, ಪ್ರತಿಯೊಂದು ಜೀವಿಗಳಲ್ಲಿ ನಾವು ದೇವರನ್ನು ಕಾಣಬೇಕು. ರಾಮಕೃಷ್ಣ ಶಾರದಾಶ್ರಮ ಅದೇ ಧ್ಯೇಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರದ ಸೇವೆಯಲ್ಲಿ ಕೇಂದ್ರ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಜಗತ್ತಿನಾದ್ಯಂತ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.

೨೦೧೮ರಲ್ಲಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಜನರಿಗೆ ಬೇಕಾದ ತುರ್ತು ಅಗತ್ಯತೆ ಬಗ್ಗೆ ನಾವು ಮೊದಲು ಗಮನಹರಿಸಿದೆವು. ಆಹಾರ, ಆರೋಗ್ಯದ ಕಡೆಗೆ ಒತ್ತು ಕೊಟ್ಟು ನಂತರದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ಬೇಕಾದ ಸೇವೆಯನ್ನು ನೀಡಿದೆವು. ಇಂಥ ಕಾರ್ಯದಲ್ಲಿ ರಾಮಕೃಷ್ಣ ಮಿಷನ್ ಸದಾ ಮುಂದೆ ನಿಂತು ಕೆಲಸ ಮಾಡುತ್ತದೆ. ನಮ್ಮ ಶಾಖೆಗಳು ಜಗತ್ತಿನಾದ್ಯಂತ ಇದೆ ಎಂದು ತಿಳಿಸಿದರು.

ಕೆ. ನಿಡುಗಣೆ ಪಂಚಾಯಿತಿ ವತಿಯಿಂದ ಹಕ್ಕುಪತ್ರ ವಿತರಿಸಲಾಯಿತು. ಆಶ್ರಮ ವತಿಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಲೇಖನಿ ಹಾಗೂ ನೋಟ್ ಪುಸ್ತಕವನ್ನು ಆಶ್ರಮದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರು ವಿತರಿಸಿದರು.

ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೆ.ಎಸ್. ದೇವಯ್ಯ, ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ, ರಾಮಕೃಷ್ಣ ಶಾರದಾಶ್ರಮದ ಚಿ.ನಾ. ಸೋಮೇಶ್ ಮಾತನಾಡಿದರು. ಸ್ಥಳೀಯರಾದ ಬಿ.ಎ. ಆನಂದ ಅಧ್ಯಕ್ಷತೆ ವಹಿಸಿದ್ದರು. ಕಿಶೋರ್ ರೈ ಕತ್ತಲೆಕಾಡು ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಸಂಜೀವ ರೈ ಪ್ರಾರ್ಥಿಸಿದರು. ಸಗಾಯ ರಾಣಿ ಸ್ವಾಗತಿಸಿದರು. ಗ್ರಾಪಂ ಅಧ್ಯಕ್ಷ ಕೆ.ಕೆ. ಅಯ್ಯಪ್ಪ, ಸದಸ್ಯರಾದ ಅನಿತಾ, ಪುಷ್ಪಲತಾ ಮುಂತಾದವರಿದ್ದರು.