ಕೂಡಿಗೆ, ಡಿ. ೨೭ : ಕೂಡಿಗೆಯಲ್ಲಿರುವ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯಲ್ಲಿ ೧೯೯೫-೯೮ನೇಯ ಸಾಲಿನವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆಗೆ ಶೌಚಾಲಯವನ್ನು ನಿರ್ಮಿಸಿ ಕೊಡುವುದರ ಜೊತೆಗೆ, ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ಶಾಲೆಯ ಸಭಾಂಗಣದಲ್ಲಿ ನಡೆಯಿತು.
ನೂತನವಾಗಿ ನಿರ್ಮಿಸಿದ ಬಾಲಕಿಯರ ಶೌಚಾಲಯದ ಕಟ್ಟಡವನ್ನು ನಿವೃತ್ತ ಮುಖ್ಯ ಶಿಕ್ಷಕಿ ಪಿ.ಜಿ. ಪಾರ್ವತಿಯವರು ಉದ್ಘಾಟಿಸಿದರು.
ನಂತರ ವಿದ್ಯಾರ್ಥಿಗಳು ತಮಗೆ ಬೋಧನೆ ಮಾಡಿದ ಎಲ್ಲಾ ಶಿಕ್ಷಕರನ್ನು ಶಾಲು ಹೊದಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು.
ಆ ಅವಧಿಯಲ್ಲಿ ವ್ಯಾಸಂಗ ಮಾಡಿದ ಸುಮಾರು ೫೨ ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿದ್ದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಪಿ.ಜಿ. ಪಾರ್ವತಿ ಕಲಿತ ಶಾಲೆಗೆ ಕೊಡುಗೆ ನೀಡಿದ ಹಳೇ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳಾದ ಯಲಕನೂರು ಗ್ರಾಮದ ಬಿ.ಎನ್. ರಘು, ಎಲ್. ರವಿ ಬಸವನತ್ತೂರು ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪುಷ್ಪ ಸಿಂಚನದ ಮೂಲಕ ಗುರುಗಳನ್ನು ಸ್ವಾಗತಿಸಿದ ವಿದ್ಯಾರ್ಥಿಗಳು ಶಾಲೆಗಾಗಿ ಮತ್ತಷ್ಟು ಸಹಕಾರವನ್ನು ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಸಿ. ದುರ್ಗೇಶ್ ವಹಿಸಿದ್ದರು.