ಸೋಮವಾರಪೇಟೆ,ಡಿ.೨೮: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ರೈತ ಸಂಘದಿAದ ಪಟ್ಟಣದ ಜೇಸೀ ವೇದಿಕೆಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ೧೬ ದಿನಗಳನ್ನು ಪೂರೈಸಿದ್ದು, ತಾ. ೨೯ರಂದು (ಇಂದು) ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ತಾ.೨೯ರಂದು ರೈತ ಚಳುವಳಿಯ ಜಾಥಾ ಪಟ್ಟಣದಲ್ಲಿ ನಡೆಯಲಿದ್ದು, ಜೇಸಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಬೆಳಿಗ್ಗೆ ೧೦.೩೦ ಗಂಟೆಗೆ ಸ್ವಾಮಿ ವಿವೇಕಾನಂದ ಸರ್ಕಲ್‌ನಿಂದ ರೈತರ ಮೆರವಣಿಗೆ ನಡೆದು ತಹಶೀಲ್ದಾರರ ಮೂಲಕ ಸರ್ಕಾರ ಮನವಿ ಪತ್ರ ಸಲ್ಲಿಸಲಾಗುವುದು ಎಂದು ರೈತ ಹೋರಾಟ ಸಮಿತಿಯ ದಿನೇಶ್ ತಿಳಿಸಿದ್ದಾರೆ.

ಕಾಫಿ ಬೆಳೆಗಾರರ ೧೦ ಎಚ್.ಪಿ.ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಕಾಫಿ, ಕಾಳುಮೆಣಸು ಏಲಕ್ಕಿ ಬೆಳೆಗಳಿಗೆ ಬೆಂಬಲ ಬೆಲೆ(ಎಂಎಸ್‌ಪಿ) ನೀಡುವ ತನಕ ಹೋರಾಟ ನಡೆಯುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು, ನಂತರ ಜನಪ್ರತಿನಿಧಿಗಳ ಮನೆಯ ಮುಂದೆಯೂ ಧರಣಿ ನಡೆಸಲಾಗುವುದು. ಸರ್ಕಾರ ಕೊಡಗು ಜಿಲ್ಲೆಯ ಕಾಫಿ ಬೆಳೆಯುವ ರೈತರ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕೆ.ಎಂ.ದಿನೇಶ್ ಎಚ್ಚರಿಕೆ ನೀಡಿದ್ದಾರೆ.

ರೈತ ಹೋರಾಟಗಾರರಾದ ತಮ್ಮಯ್ಯ ಸಕಲೇಶಪುರ, ರಾಜ ಯಡೂರು, ಬಸವರಾಜು ಶುಂಠಿ, ಹನೀಫ್ ಕೊಡ್ಲಿಪೇಟೆ, ರಾಜು ಹಾನಗಲ್ಲು, ಮಂದಣ್ಣ ಕಿಬ್ಬೆಟ್ಟ, ಕುಶಾಲಪ್ಪ ಯಡೂರು, ರಾಜಪ್ಪ ತಲ್ತಾರೆ, ಸುರೇಶ್ ಹಣಕೋಡು ಸೇರಿದಂತೆ ಇತರರು ಧರಣಿಯಲ್ಲಿದ್ದರು.