ಮಡಿಕೇರಿ,ಡಿ.೨೮ : ಕಸದ ಕೊಂಪೆಯಾಗಿದ್ದ ಮಡಿಕೇರಿಯ ಹೈಟೆಕ್ ಖಾಸಗಿ ಬಸ್ ನಿಲ್ದಾಣ ಸ್ವಚ್ಛವಾಗಿದೆ. ನಿಲ್ದಾಣದ ಅವ್ಯವಸ್ಥೆ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿರುವ ನಗರಸಭಾ ಆಡಳಿತ ಮಂಡಳಿ, ಆಯುಕ್ತರು ಇಂದು ನಿಲ್ದಾಣವನ್ನು ಸ್ವಚ್ಛಗೊಳಿಸುವದರೊಂದಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೆ ಸ್ವಚ್ಛತೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಕಾವಲುಗಾರರನ್ನು ನೇಮಕ ಮಾಡಲಾಗಿದೆ.
ನಿಲ್ದಾಣದ ಅವ್ಯವಸ್ಥೆ ಬಗ್ಗೆ ವಾರ್ಡ್ ಸದಸ್ಯ ಅರುಣ್ ಶೆಟ್ಟಿ ಹಾಗೂ ಸದಸ್ಯರುಗಳಾದ ಶ್ವೇತಾ ಪ್ರಶಾಂತ್ , ಸಬಿತ ನಿನ್ನೆ ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಪಂದಿಸಿದ ನಗರಸಭೆ, ನಿಲ್ದಾಣವನ್ನು ಸ್ವಚ್ಛಗೊಳಿಸಿದೆ. ತಕ್ಷಣಕ್ಕೆ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು, ಅಧಿಕಾರಿಗಳು, ಪೌರಕಾರ್ಮಿಕರು ಸ್ಪಂದಿಸಿರುವ ಬಗ್ಗೆ ಅರುಣ್ ಶೆಟ್ಟಿ ಶ್ಲಾಘಿಸಿದ್ದಾರೆ.