ವೀರಾಜಪೇಟೆ, ಡಿ. ೨೮: ನಗರದ ಯೂತ್ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ಆವೃತ್ತಿಯ ವೀರಾಜಪೇಟೆ ಪ್ರೀಮಿಯರ್ ಲೀಗ್‌ನಲ್ಲಿ ‘ಟೀಂ ಸ್ಪಿರಿಟ್’ ಮತ್ತೊಮ್ಮೆ ಜಯಗಳಿಸುವ ಮೂಲಕ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು. ರಾಯಲ್ ಫ್ರೆಂಡ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ನಗರದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಶಾಲಾ ಮೈದಾನದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ವರ್ಣರಂಜಿತ ತೆರೆ ಕಂಡಿತು.

ಕ್ರೀಡಾ ಉತ್ಸವದಲ್ಲಿ ಒಟ್ಟು ೧೪ ತಂಡಗಳು ಸೆಣಸಾಡಿದವು. ಅಂತಿಮ ಪಂದ್ಯಾಟವು ರಾಯಲ್ಸ್ ಫ್ರೆಂಡ್ಸ್ ಮತ್ತು ಟೀಮ್ ಸ್ಪಿರಿಟ್ ನಡುವೆ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಸ್ಪಿರಿಟ್ ತಂಡವು ಐದು ವಿಕೆಟ್ ಕಳೆದುಕೊಂಡು ನಿಗದಿತ ೮ ಒವರ್‌ಗಳಲ್ಲಿ ೬೬ ರನ್‌ಗಳ ಗುರಿಯನ್ನು ರಾಯಲ್ ಫ್ರೆಂಡ್ಸ್ ತಂಡಕ್ಕೆ ನೀಡಿತು. ಟೀಮ್ ಸ್ಪಿರಿಟ್ ತಂಡದ ಪರ ಸಂಶು ಅವರು ವೈಯಕ್ತಿಕ ೫೨ ರನ್ ಪೇರಿಸಿ ಉತ್ತಮ ಪ್ರದರ್ಶನ ನೀಡಿದರು.

ನಂತರದಲ್ಲಿ ಬ್ಯಾಟಿಂಗ್ ಮಾಡಿದ ರಾಯಲ್ಸ್ ಫ್ರೆಂಡ್ಸ್ ತಂಡವು ನಿಗದಿತ ೮ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಕೇವಲ ೪೧ ರನ್‌ಗಳನ್ನು ದಾಖಲಿಸುವಲ್ಲಿ ಶಕ್ತವಾಯಿತು. ಈ ಮೂಲಕ ಟೀಮ್ ಸ್ಪಿರಿಟ್ ತಂಡವು ೨೫ ರನ್ ಅಂತರದಿAದ ನಾಲ್ಕನೇ ವರ್ಷದ ಚಾಂಪಿಯನ್ ಪಟ್ಟಕ್ಕೆ ಮುತ್ತಿಟ್ಟಿತ್ತು. ವಿಜೇತ ತಂಡಕ್ಕೆ ಒಂದು ಲಕ್ಷ ನಗದು ಸೇರಿದಂತೆ ಆಕರ್ಷಕವಾದ ಟ್ರೋಫಿ ಪರಾಜಿತ ತಂಡಕ್ಕೆ ೭೦ ಸಾವಿರ ನಗದು ಪುರಸ್ಕಾರ ಲಭಿಸಿತು.

ಅಂತಿಮ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿ ಮತ್ತು ಸರಣಿಯ ಉತ್ತಮ್ಮ ಬ್ಯಾಟ್ಸ್ಮೆನ್ ಪ್ರಶಸ್ತಿ ಸಂಶು ಅವರು ಪಡೆದುಕೊಂಡರು, ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ರಾಯಲ್ ಫ್ರೆಂಡ್ಸ್ ತಂಡದ ರಜಾಕ್ ಪಡೆದುಕೊಂಡರು.

ಸಭಾ ಕಾರ್ಯಕ್ರಮ: ಕ್ರಿಕೆಟ್ ಹಬ್ಬದ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ ಅವರು, ಎಲ್ಲಾ ಧರ್ಮಗಳನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದರು. ಪ.ಪಂ. ಸದಸ್ಯ ಮೊಹಮ್ಮದ್ ರಾಫಿ ಮಾತನಾಡಿ, ಕ್ರಿಕೆಟ್ ಹಬ್ಬವು ವ್ಯವಸ್ಥಿತವಾಗಿ ಆಯೋಜನೆಗೊಂಡಿದೆ ಎಂದು ಶ್ಲಾಘಿಸಿದರು.

ಕ್ರಿಕೆಟ್ ಲೀಗ್‌ನ ಪ್ರಮುಖ ಪ್ರಾಯೋಜಕ ಉದ್ಯಮಿ ಸಂದೀಪ್ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಎಸ್. ಮತೀನ್ ಮಾತನಾಡಿದರು.

ವೇದಿಕೆಯಲ್ಲಿ ಕರಾಟೆಯಲ್ಲಿ ಸಾಧನೆ ಮಾಡಿದ ಕೆ. ರಾಹುಲ್ ಮತ್ತು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗಿಸ್ ಅವರನ್ನು ಸನ್ಮಾನಿಸಲಾಯಿತು. ಅಂತರ ರಾಷ್ಟಿçÃಯ ರಗ್ಬಿಪಟು ಮಾದಂಡ ತಿಮ್ಮಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತ, ಸದಸ್ಯರಾದ ಆಶಾ ಸುಬ್ಬಯ್ಯ, ಅನಿತ ಕುಮಾರ್, ಅಗಸ್ಟೀನ್ ಬೆನ್ನಿ ಹಾಗೂ ದಾನಿಗಳು ಉಪಸ್ಥಿತರಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ