ಮಡಿಕೇರಿ, ಡಿ. ೨೭: ‘ಹೈಟೆಕ್’ ಸ್ಪರ್ಶದೊಂದಿಗೆ ನಿರ್ಮಾಣ ಗೊಂಡಿರುವ, ಯಾವುದೇ ವ್ಯವಸ್ಥೆ ಇಲ್ಲದಿರುವ ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣ ಮತ್ತೆ ಕಸದ ಕೊಂಪೆಯಾಗಿದೆ.

ತೀರಾ ‘ಕೊಚ್ಚೆ’ಯಾಗಿದ್ದ ನಿಲ್ದಾಣವನ್ನು ಸಾರ್ವಜನಿಕರು, ಜನಪ್ರತಿನಿಧಿಗಳ ಪ್ರತಿರೋಧದ ನಡುವೆ ಇತ್ತೀಚೆಗಷ್ಟೆ ‘ಕ್ಲೀನ್’ ಮಾಡಲಾಗಿತ್ತು. ಆದರೆ, ಇದೀಗ ನಿರ್ವಹಣೆಯಿಲ್ಲದೆ ಮತ್ತೆ ‘ಕೊಂಪೆ’ಯಾಗಿದೆ. ವ್ಯಾಪಾರಕ್ಕೆಂದು ತೆರೆದಿರುವ ಅಂಗಡಿ ಮಳಿಗೆಗಳ ಬಾಗಿಲಿಗೆ ಹಾಕಿದ್ದ ಬೀಗ ಮಾಯವಾಗಿದ್ದು, ಮಳಿಗೆಗಳೀಗ ಕೆಲವರ ‘ಮಲಗುವ ಕೋಣೆಯಂತಾಗಿದೆ.’ ಚೀಲ, ಪೇಪರ್, ಬಟ್ಟೆ, ಬರೆ, ಬಾಟಲಿ ಎಲ್ಲವೂ ಇಲ್ಲಿವೆ.!

ಇಲ್ಲಿನ ‘ವ್ಯವಸ್ಥೆ...!’ ಬಗ್ಗೆ ಮತ್ತೊಮ್ಮೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ನಗರಸಭಾ ಸದಸ್ಯರುಗಳಾದ ಅರುಣ್‌ಶೆಟ್ಟಿ, ಶ್ವೇತಾ, ಸಬಿತಾ ಭೇಟಿ ನೀಡಿ ಪರಿಶೀಲನೆ ಮಾಡಿ, ಸ್ಥಳಕ್ಕೆ ನಗರಸಭಾ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ಅವ್ಯವಸ್ಥೆಗಳ ಬಗ್ಗೆ ಕಿಡಿಕಾರಿದರು.

ನಿಲ್ದಾಣದಲ್ಲಿ ನೀರಿನ ವ್ಯವಸ್ಥೆಯೊಂದಿಗೆ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ವಾರ್ಡ್ ಸದಸ್ಯ ಅರುಣ್ ಶೆಟ್ಟಿ ಎಚ್ಚರಿಕೆ ನೀಡಿದರು.