ಸೋಮವಾರಪೇಟೆ, ಡಿ.೨೭: ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಕೊಡವ ಜನಾಂಗದವರ ಜನಸಂಖ್ಯೆ ಕ್ಷೀಣವಾಗುತ್ತಿರುವುದು ವಿಷಾದ. ಈ ನಿಟ್ಟಿನಲ್ಲಿ ಕೊಡವರು ಗಂಭೀರ ಚಿಂತನೆ ನಡೆಸಬೇಕೆಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಿಕುಟ್ಟಿರ ಸಿ. ಪೂವಯ್ಯ ಅಭಿಪ್ರಾಯಿಸಿದರು.
ಇಲ್ಲಿನ ಕೊಡವ ಸಮಾಜದ ವತಿಯಿಂದ ಆಯೋಜಿಸಿದ್ದ ಪುತ್ತರಿ ಊರೊರ್ಮೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿಯೂ ಕೊಡವ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಹೊರ ಜಿಲ್ಲೆಯಲ್ಲಿ ನೆಲೆಸಿರುವ ಜನಾಂಗ ಬಾಂಧವರು ಕನಿಷ್ಟ ತಮ್ಮ ಮತದಾನದ ಗುರುತಿನ ಚೀಟಿಯನ್ನಾದರೂ ಕೊಡಗು ಜಿಲ್ಲೆಯ ವಿಳಾಸದಲ್ಲಿಯೇ ಉಳಿಸಿಕೊಳ್ಳುವಂತಾಗಬೇಕು ಎಂದರು.
ಕೊಡವರು ಉದ್ಯೋಗ, ವ್ಯವಹಾರ ನಿಮಿತ್ತ ಹೊರ ಜಿಲ್ಲೆಗೆ ಹೋದರೂ, ಕೊಡಗಿನ ಸಂಪರ್ಕವನ್ನು ಕಡಿದುಕೊಳ್ಳಬಾರದು. ಇಲ್ಲಿನ ಆಸ್ತಿಯನ್ನು ಮಾರಾಟ ಮಾಡಬಾರದು ಎಂದು ಸಿ. ಪೂವಯ್ಯ ಕರೆ ನೀಡಿದರು.
ತಜ್ಞರ ಪ್ರಕಾರ ಕೊಡಗು ಜಿಲ್ಲೆ ಬಯೋಲಾಜಿಕ್ ಹಾಟ್ಸ್ಪಾಟ್ ಆಗಿದೆ. ಇಲ್ಲಿಯ ಪರಿಸರ ನಾಶವಾದರೆ ಅದರ ವ್ಯತಿರಿಕ್ತ ಪರಿಣಾಮ ದೇಶಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಬೀರಲಿದೆ. ಈ ನಿಟ್ಟಿನಲ್ಲಿ ಜನಾಂಗ ಬಾಂಧವರೂ ಸೇರಿದಂತೆ ಸರ್ವರೂ ಪರಿಸರದ ರಕ್ಷಣೆಗೆ ಮುಂದಾಗಬೇಕೆAದು ಮನವಿ ಮಾಡಿದರು.
ಉದ್ಯಮಿ ಕಾಂಡAಡ ಎಂ. ಬೋಪಣ್ಣ ಮಾತನಾಡಿ, ಕೊಡವ ಜನಾಂಗವು ಉನ್ನತ ಹಾಗೂ ಶ್ರೇಷ್ಠ ಜನಾಂಗವಾಗಿದೆ. ನಮ್ಮಲ್ಲಿನ ಗುಣ, ನಡತೆ, ಶಿಸ್ತು, ಆಚಾರ- ವಿಚಾರ, ಧೈರ್ಯ, ಸ್ಥೆöÊರ್ಯ ರಕ್ತಗತವಾಗಿ ಬಂದಿದೆ. ಅದರಂತೆಯೇ ನಮ್ಮ ನೆರೆಹೊರೆಯ ಮಕ್ಕಳೊಂದಿಗೆ ಸ್ಪರ್ಧೆಗಿಳಿಯುವುದು ಬಿಟ್ಟು ನಮ್ಮ ಮಕ್ಕಳಲ್ಲಿನ ಆಸಕ್ತಿ, ಅಭಿರುಚಿ ಹಾಗೂ ಬುದ್ಧಿವಂತಿಕೆಯನ್ನು ಗುರುತಿಸಿ ಉನ್ನತ ವಿದ್ಯಾಭ್ಯಾಸ ಒದಗಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಕೊಡವ ಆಚಾರ, ವಿಚಾರ, ಕಲೆ- ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಮಾರು ೬೦ ಲಕ್ಷ ರೂ. ವೆಚ್ಚದಲ್ಲಿ ಕೊಡವ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.
ಅನ್ಯ ಜನಾಂಗದವರಿಗೆ ಧರ್ಮಗುರುಗಳಿದ್ದು ಅವರ ಮಾರ್ಗದರ್ಶನದಲ್ಲಿ ಜನಾಂಗ ಮುಂದುವರೆಯುತ್ತಾ, ಸಾಮಾಜಿಕ, ರಾಜಕೀಯವಾಗಿ ಸ್ಥಾನಮಾನ ಗಳಿಸುತ್ತಿದ್ದಾರೆ. ನಮ್ಮಲ್ಲಿ ಧರ್ಮಗುರುಗಳಿಲ್ಲದಿರುವುದರಿಂದ ಫೆಡರೇಷನ್ ಆಫ್ ಕೊಡವ ಅಸೋಸಿಯೇಷನ್ ಗುರುವಿನಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಿ, ಗೌರವಿಸಲಾಯಿತು. ವಿಶೇಷ ಸಾಧನೆ ಮಾಡಿದ ಅಜ್ಜಮಕ್ಕಡ ಅಕ್ಷಿತಾ ಕಾರ್ಯಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ಪಾರುವಂಡ ಶರೂ ಬೆಳ್ಯಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಅಜ್ಜಿಕುಟ್ಟಿರ ಡಯಾನ ಪೂವಯ್ಯ, ಕಾಂಡAಡ ಬೋಜಿ ಬೋಪಣ್ಣ, ಸಮಾಜದ ಉಪಾಧ್ಯಕ್ಷ ಪೂಣಚ್ಚ, ಕಾರ್ಯದರ್ಶಿ ಅನಿಲ್ ಉಪಸ್ಥಿತರಿದ್ದರು. ಹಂಚೆಟ್ಟಿರ ಸರಿತಾ ಪ್ರಾರ್ಥಿಸಿದರು.