ಸೋಮವಾರಪೇಟೆ,ಡಿ.೨೮: ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕನ್ನಡ ಸಂಘ ಸ್ಥಾಪನೆಯೊಂದಿಗೆ ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳನ್ನು ಸ್ಥಾಪಿಸುವ ಚಿಂತನೆ ನಡೆದಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಪರಿಷತ್ನ ಸರ್ವ ಸದಸ್ಯರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೨೧೫೦ ಸದಸ್ಯರಿದ್ದು, ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು. ೨೦ಸಾವಿರ ಸದಸ್ಯತ್ವದ ಗುರಿಯಿದ್ದು, ಕನ್ನಡ ಕಲಿತವರು ಸದಸ್ಯರಾಗಬಹುದು. ಕನ್ನಡ ಅನ್ನ ಕೊಡುವ ಭಾಷೆಯಾಗಿದ್ದು, ಮಾತೃಭಾಷೆಯ ಬೆಳವಣಿಗೆಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಪರಿಷತ್ನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಪ್ರತಿಭಾವಂತರಿಗೆ, ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಯುವಕ, ಯುವತಿಯರಿಗೆ ಸಾಹಿತ್ಯ ಧ್ವಜವನ್ನು ಕೊಟ್ಟು ಪ್ರೋತ್ಸಾಹಿಸಬೇಕಾಗಿದೆ. ಎರಡನೆ ಹಂತದ ನಾಯಕರನ್ನು ಬೆಳೆಸಲು ಹಿರಿಯರು ಮುಂದಾಗಬೇಕು. ಸದಸ್ಯರ ಸಲಹೆ ಪಡೆದು ಸಾಹಿತ್ಯ ಪರಿಷತ್ನ್ನು ಮುನ್ನಡೆಸಬೇಕು. ಅಧಿಕಾರ ಲಾಲಸೆ ಹಾಗು ರಾಜಕೀಯ ಮಾಡಲು ಕನ್ನಡ ಸಾಹಿತ್ಯ ಪರಿಷತ್ನ್ನು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಚ್.ಜೆ.ಜವರ, ಮಾಜಿ ಅಧ್ಯಕ್ಷ ಎಸ್.ಡಿ.ವಿಜೇತ ಇದ್ದರು. ಕೆ.ಎ.ಆದಂ ಹಾಗೂ ಉಪನ್ಯಾಸಕಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.