ಆಲೂರುಸಿದ್ದಾಪುರ, ಡಿ. ೨೭: ‘ವಾಹನ ಸವಾರರು ಕಡ್ಡಾಯವಾಗಿ ತಮ್ಮ ಚಾಲನೆ ಪರವಾನಿಗೆ , ವಾಹನ ವಿಮೆ, ವಾಹನದ ದಾಖಲಾತಿಗಳನ್ನು ವಾಹನದಲ್ಲಿ ಇಟ್ಟುಕೊಳ್ಳಬೇಕು ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಎಸ್.ಪರಶಿವಮೂರ್ತಿ ಹೇಳಿದರು.

ಸಮೀಪದ ಮಾಲಂಬಿ ಗ್ರಾಮದಲ್ಲಿ ಕರ್ನಾಟಕ ವಾಹನ ಚಾಲಕರ ಮತ್ತು ಮಾಲೀಕರ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ವಾಹನ ಚಾಲಕ ಮತ್ತು ಮಾಲೀಕರಿಗಾಗಿ ಅಪಘಾತ ತಡೆ ಮಾಸಾಚರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಹನ ಅಪಘಾತವಾಗುವ ಸಂದರ್ಭದಲ್ಲಿ ಕೆಲವು ವಾಹನ ಚಾಲಕರು ಸ್ಥಳದಲ್ಲೆ ವಾಹನವನ್ನು ನಿಲ್ಲಿಸದೆ ಪರಾರಿಯಾಗುವ ಅಮಾನವಿಯ ಪ್ರವೃತಿ ದೂರವಾಗಬೇಕಿದೆ. ಚಾಲಕರು ವಾಹನ ಚಾಲನೆ ಮಾಡುವಾಗ ಮದ್ಯ ಸೇವನೆ ಮಾಡಬಾರದು ಇದು ಅಪರಾಧ. ಇದರಿಂದ ಹೆಚ್ಚಾಗಿ ವಾಹನ ಅಪಘಾತಗಳಾಗುತ್ತಿವೆ ಎಂದರು. ವಾಹನ ಚಾಲಕರಿಗೆ ವಾಹನ ಸಂಚಾರ ನಿಯಮಗಳನ್ನು ತಿಳಿದಿರಬೇಕು, ಅತಿವೇಗವಾಗಿ ಚಲಾಯಿಸುವುದು, ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು, ನಿದ್ದೆಗಣ್ಣಿನಲ್ಲಿ ವಾಹನ ಚಲಾಯಿಸುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಓಡಿಸುವುದು ಇಂತಹ ಸಂಚಾರ ನಿಯಮ ಉಲ್ಲಂಘನೆಯಿAದ ವಾಹನ ಅಪಘಾತಗಳಾಗುತ್ತಿವೆ ಈ ನಿಟ್ಟಿನಲ್ಲಿ ವಾಹನ ಚಾಲಕರು ವಾಹನ ಸಂಚಾರ ನಿಯಮ ಕಾಯಿದೆಗಳನ್ನು ಉಲ್ಲಂಘಿಸದೆ ಪೊಲೀಸ್ ಕರ್ತವ್ಯಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

ವಕೀಲ ನಾಗೇಂದ್ರ ಬಾಬು ಮಾತನಾಡಿ, ವಾಹನ ಮಾಲೀಕರು ವಾಹನದ ಬೆಲೆಗೆ ತಕ್ಕಂತೆ ವಿಮೆ ಮಾಡಿಸಬೇಕು. ಕಡಿಮೆ ಹಣನೀಡಿ ವಿಮೆ ಪಾಲಿಸಿಕೊಂಡರೆ ಮುಂದೆ ಸಮಸ್ಯೆಯಾಗುತ್ತದೆ ಎಂದರು. ವಾಹನ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತವಾಗುತ್ತದೆ ಇದನ್ನು ಚಾಲಕರು ತಮ್ಮ ಕುಟುಂಬದವರ ಬಗ್ಗೆ ಯೋಚಿಸಿ ವಾಹನ ಸಂಚಾರ ನಿಯಮವನ್ನು ಅರಿತು ವಾಹನ ಓಡಿಸಬೇಕು ಚಾಲಕರು ಮಾನವೀಯ ಗುಣವನ್ನು ಅಳವಡಿಸಿಕೊಳ್ಳುವುದರ ಜೊತೆಯಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ರಾಜ್ಯ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಸಗಟೂರು ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಅಧ್ಯಕ್ಷ ಆನಂದ್ ಮುಖಾಸಿ, ಜಿಲ್ಲಾ ಸಂಘದ ಅಧ್ಯಕ್ಷ ಚಂದ್ರು, ಸೋಮವಾರಪೇಟೆ ತಾಲೂಕು ಸಂಘದ ಉಪಾಧ್ಯಕ್ಷ ಸುನಿಲ್, ಪ್ರಮುಖರಾದ ಪುನೀತ್, ಲೋಕೇಶ್, ಶಶಿಕುಮಾರ್, ವಿಜಯ್, ಪ್ರೇಮಾಗೌಡ ಮುಂತಾದವರಿದ್ದರು.