ಪೊನ್ನಂಪೇಟೆ, ಡಿ. ೨೭: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಘುನಾಥ್ ಅಧ್ಯಕ್ಷತೆಯಲ್ಲಿ ಸಮುದಾಯದತ್ತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜಕಿ ವಿಶಾಲಾಕ್ಷಿ ಮಾತನಾಡಿ ಪೋಷಕರ ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ಮಕ್ಕಳ ಕಲಿಕೆಯ ಮಟ್ಟವನ್ನು ಹೆಚ್ಚಿಸಲು ಸಮುದಾಯ ದತ್ತ ಕಾರ್ಯಕ್ರಮ ಸಹಾಯಕವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಬಿ.ಎಂ.ವಿಜಯ ಮಾತನಾಡಿ ಮಕ್ಕಳಿಗೆ ಶಿಸ್ತು, ಸಮಯಪಾಲನೆ ಬಗ್ಗೆ ಪೋಷಕರು ತಿಳಿಸಿ ಕೊಡಬೇಕು. ಮಕ್ಕಳ ಸುರಕ್ಷತೆ ಹಾಗೂ ಭದ್ರತೆಗೆ ಒತ್ತು ಕೊಟ್ಟು, ಕಲಿಕೆಯಲ್ಲಿ ಕಾಲ ಕಾಲಕ್ಕೆ ಬದಲಾವಣೆಗೆ ಹೊಂದಿಕೊಳ್ಳಬೇಕು. ಪೋಷಕರು ಮಕ್ಕಳನ್ನು ಸ್ವಚ್ಛವಾಗಿ ಶಾಲೆಗೆ ಕಳುಹಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಗಮನ ನೀಡುವಂತೆ ಸಲಹೆ ನೀಡಿದರು. ಸಹ ಶಿಕ್ಷಕಿ ಐ.ಎಂ.ರೋಜಿ ಮಕ್ಕಳ ಕಲಿಕಾ ಮಟ್ಟ, ಶಾಲಾ ಚಟುವಟಿಕೆ, ಅಕ್ಷರ ದಾಸೋಹ, ಕ್ಷೀರ ಭಾಗ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೋಷಕರು ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ಹಂಚಿಕೊAಡರು. ಪೊನ್ನಂಪೇಟೆ ಗ್ರಾ.ಪಂ. ಸದಸ್ಯರಾದ ಕೆ.ವಿ. ರಾಮಕೃಷ್ಣ, ಮಂಜುಳ ಮಣಿಕಂಠ, ಎಸ್. ಡಿ.ಎಂ ಸಿ ಉಪಾಧ್ಯಕ್ಷ ಮುರಳಿ ಗಣೇಶ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಇದ್ದರು. ವಿದ್ಯಾರ್ಥಿ ಘನ ಶಾಮ್ ಶರ್ಮ ಪ್ರಾರ್ಥಿಸಿದರೆ, ಶಿಕ್ಷಕ ಬಿ.ಎಂ. ವಿಜಯ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಟಿ. ಎಸ್. ಮಹೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.