*ವೀರಾಜಪೇಟೆ, ಡಿ. ೨೬: ನಂದಿನಿ ಹಾಲಿನ ವಾಹನವೊಂದು ಅವಘಡಕ್ಕೀಡಾಗಿ ಕ್ಲೀನರ್ ಮೃತಪಟ್ಟ ಘಟನೆ ನಡೆದಿದೆ.
ಕೂಡಿಗೆಯ ನಂದಿನಿ ಹಾಲಿನ ಡೈರಿಯಿಂದ ದಿನಂಪ್ರತಿ ವೀರಾಜಪೇಟೆ ನಗರಕ್ಕೆ ಹಾಲು ಸರಬರಾಜು ಮಾಡುತ್ತಿದ್ದ, ಹರ್ಷ ಎಂಬವವರು ಚಾಲಿಸುತ್ತಿದ್ದ ವಾಹನ (ಕೆಎ ೪೫ ೪೪೨೩) ಭಾನುವಾರ ಬೆಳಗ್ಗಿನ ಜಾವ ೩.೧೫ಕ್ಕೆ ಸಿದ್ದಾಪುರ-ವೀರಾಜಪೇಟೆ ರಸ್ತೆಯಲ್ಲಿ ಬರುತ್ತಿದ್ದಾಗ ಬಿಳುಗುಂದ ಜಂಕ್ಷನ್ ಬಳಿ ದಟ್ಟ ಮಂಜು ಕವಿದಿದ್ದ ಕಾರಣ ರಸ್ತೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಮಗುಚಿ ಪಕ್ಕದ ಗದ್ದೆಗೆ ಬಿದ್ದಿದೆ. ಪರಿಣಾಮ ವಾಹನದಲ್ಲಿದ್ದ ಕ್ಲೀನರ್ ಅಜಯ್ (೩೪) ಎಂಬವರು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ಸ್ಥಳೀಯರ ನೆರವಿನಿಂದ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗಮಧ್ಯೆ ಅಜಯ್ ಕೊನೆಯುಸಿರೆಳೆದಿದ್ದಾರೆ. ಗಾಡಿಯಲ್ಲಿದ್ದ ಮತ್ತಿಬ್ಬರು ಸಿಬ್ಬಂದಿಗಳಾದ ಹುಣಸೂರಿನ ಮುತ್ತುರಾಯನ ಹೊಸಳ್ಳಿಯ ಮುತ್ತುರಾಜು ಮತ್ತು ಚಾಲಕ ಕೂಡಿಗೆಯ ಹರ್ಷ ಎಂಬವರುಗಳಿಗೂ ತೀವ್ರಸ್ವರೂಪದ ಗಾಯಗಳಾಗಿದ್ದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಅಜಯ್ ಹುಣಸೂರು ತಾಲೂಕಿನ ಮರೂರು ಗ್ರಾಮದ ನಿವಾಸಿಯಾಗಿದ್ದು, ತಾಯಿ, ತಂಗಿ ಮತ್ತು ಅಣ್ಣನನ್ನು ಅಗಲಿದ್ದಾರೆ. ಈ ಸಂಬAಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಉಷಾ/ಕೆ.ಕೆ.ಎಸ್.