ಮಡಿಕೇರಿ, ಡಿ. ೨೬: ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ‘ಮಾಹಿತಿ ಶಿಕ್ಷಣ’ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವ್ಯಾಪ್ತಿಯ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-೧೯ ಕಾರಣದಿಂದ ಬಾಧಿತ ಮಕ್ಕಳಿಗೆ ಭಾವನಾತ್ಮಕ ಮತ್ತು ನೈತಿಕ ಸಾಮಾಜಿಕ ನೆರವನ್ನು ಒದಗಿಸುವಲ್ಲಿ ಮಗುವಿನ ಸರ್ವೋತೋಮುಖ ಅಭಿವೃದ್ಧಿಗೆ ಬಾಲಹಿತೈಷಿ ಯೋಜನೆ ಆರಂಭಿಸಲಾಗಿದ್ದು, ಅಂತಹ ಮಕ್ಕಳಿದ್ದಲ್ಲಿ ಗುರುತಿಸಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಹಾಗೆಯೇ ಮುಖ್ಯಮಂತ್ರಿ ಅವರ ಬಾಲಸೇವಾ ಯೋಜನೆಯಡಿ ಅಗತ್ಯ ಸಹಾಯಧನ ನೀಡಲು ಸರ್ಕಾರದ ನಿರ್ದೇಶನದಂತೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಮಕ್ಕಳ ರಕ್ಷಣಾ ಘಟಕ ವ್ಯಾಪ್ತಿಯಲ್ಲಿನ ವಿಶೇಷ ಪಾಲನಾ ಯೋಜನೆ, ಪ್ರಾಯೋಜಕತ್ವ ಕಾರ್ಯಕ್ರಮ, ತರಬೇತಿ ಮತ್ತು ಅರಿವು ಕಾರ್ಯಕ್ರಮ, ಪೋಷಕತ್ವ ಹೀಗೆ ಹಲವು ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅರುಂಧತಿ ಅವರು ಜಿಲ್ಲೆಯಲ್ಲಿ ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ/ ಬಾಧಿತ ಮಕ್ಕಳಿಗೆ ಮಾಸಿಕ ರೂ. ೧ ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರಾಯೋಜಕತ್ವ ಕಾರ್ಯಕ್ರಮದಡಿ ಪೋಷಕರಿಲ್ಲದ/ ಏಕ ಪೋಷಕ ಮಕ್ಕಳಿಗೆ ಗುಣಮಟ್ಟದ ಜೀವನ ನಿರ್ವಹಣೆಗೆ ಆರ್ಥಿಕ ನೆರವು ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಮಕ್ಕಳನ್ನು ಕುಟುಂಬ ವಾತಾವರಣದಲ್ಲಿ ಬೆಳೆಸುವುದು, ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸುವುದು, ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು, ವೈದ್ಯಕೀಯ ಚಿಕಿತ್ಸೆ, ಪೌಷ್ಠಿಕ ಆಹಾರ, ವೃತ್ತಿ ತರಬೇತಿ ಹೀಗೆ ಹಲವು ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪೋಷಕತ್ವ ಕಾರ್ಯಕ್ರಮದಡಿ ಮಕ್ಕಳ ಪಾಲನೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳನ್ನು ಪಾಲನೆ ಮಾಡುವುದು, ಉಪಕಾರ್ ಯೋಜನೆಯಡಿ ವೃತ್ತಿಪರ ಕೌಶಲ್ಯ ತರಬೇತಿ, ಸ್ವ ಉದ್ಯೋಗಕ್ಕೆ ಒತ್ತು ನೀಡುವುದು, ಮುಖ್ಯಮಂತ್ತಿ ಅವರ ಬಾಲ ಸೇವಾ ಯೋಜನೆಯಡಿ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದ ಒಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯಧನ ಕಲ್ಪಿಸುವುದು, ಮಕ್ಕಳ ರಕ್ಷಣೆಗಾಗಿ ಪಿಎಂ.ಕರ‍್ಸ್ ನಡಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ ಎಂದು ಅರುಂಧತಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅಲಕ್ಷಿತ ೨೫, ಅನಾಥ ೮, ಬಾಲ ಕಾರ್ಮಿಕರು ೧೪, ಮನೆ ಬಿಟ್ಟು ಬಂದ ಮಕ್ಕಳು ೧೩, ಬಾಲ್ಯ ವಿವಾಹಕ್ಕೆ ಮುಂದಾಗಿರುವುದು ೦೧, ಏಕಪೋಷಕರನ್ನು ಹೊಂದಿರುವವರು ೯೨, ಒಪ್ಪಿಸಲ್ಪಟ್ಟ ಮಗು ೨, ಮಾನಸಿಕ ಹಿಂಸೆಗೆ ತುತ್ತಾದವರು ೫, ಇತರೆ ೧೨, ದೈಹಿಕ ಹಿಂಸೆಗೆ ಒಳಪಟ್ಟವರು ೩, ಪೋಕ್ಸೋ ೪, ಬೀದಿಬದಿ ದೊರೆತ ಮಗು ೦೧ ಒಟ್ಟು ೧೮೦ ಮಕ್ಕಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವರದಿಯಾಗಿವೆ ಎಂದು ಅರುಂಧತಿ ಅವರು ಮಾಹಿತಿ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಲತೀಪ್, ನಮಿತ, ಉಷಾ, ಕುಮಾರಿ ಅವರು ಮಕ್ಕಳ ರಕ್ಷಣೆ ಸಂಬAಧಿಸಿದAತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮುದ್ದಣ್ಣ ಅವರು ಹಲವು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಲೋಕೋಪಯೋಗಿ ಇಇ ನಾಗರಾಜು. ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಸುಮತಿ ಇತರರು ಇದ್ದರು.