ಮಡಿಕೇರಿ, ಡಿ. ೨೫: ದಕ್ಷಿಣ ಕೊಡಗಿನ ಕಾನೂರು-ಕೋತೂರು ಗ್ರಾಮದಲ್ಲಿ ತಾ. ೨೩ರಂದು ಕರಡಿ ಬಂತು... ಕರಡಿ ಎಂಬ ಘಟನೆಯಿಂದ ಈ ವ್ಯಾಪ್ತಿಯಲ್ಲಿ ಅಂದು ದಿನವಿಡೀ ಸ್ಥಳೀಯರು ಕರಡಿ ಕಾರ್ಯಾಚರಣೆಯ ಅನುಭವಕ್ಕೆ ಒಳಗಾಗಿದ್ದರು. ಅಲ್ಲಿನ ನಿವಾಸಿ ಪೋರಂಗಡ ಕಿರಣ್ ಕಾರ್ಯಪ್ಪ ಎಂಬವರ ತೋಟದ ತಂತಿ ಬೇಲಿಗೆ ಕೈ ಸಿಲುಕಿಕೊಂಡು ಕರಡಿ ಪರಿತಪಿಸಿದರೆ, ಕಿರಣ್ ಕಾರ್ಯಪ್ಪ ಹಾಗೂ ಅವರ ಒತ್ತಿನ ತೋಟದವರಾದ ಬೋಪಣ್ಣ ಅವರುಗಳ ತೋಟವೂ ಇದರ ಪರಿಣಾಮವಾಗಿ ಒಂದಷ್ಟು ಹಾನಿಗೀಡಾಗಿದೆ. ಅಂದು ಬೆಳಿಗ್ಗೆ ೮.೩೦ರ ವೇಳೆಗೆ ಕರಡಿಯ ಭಾರೀ ಅರಚಾಟ ಕೇಳಿ ಬಂದಿದ್ದು ಮೊದಲು ತೋಟ ಮಾಲೀಕರು ಇದನ್ನು ಆನೆಯಿರಬಹುದೆಂದು ಭಾವಿಸಿದ್ದಾರೆ. ಆದರೆ ನಂತರ ಶಬ್ಧ ಬರುತ್ತಿದ್ದ ಕಡೆ ತೆರಳಿ ಗಮನಿಸಿದಾಗ ತಂತಿಗೆ ಕೈ ಸಿಲುಕಿಕೊಂಡು ವಿಲವಿಲ ಒದ್ದಾಡುತ್ತಿದ್ದ ಕರಡಿ ಗೋಚರಿಸಿದೆ. ಬಳಿಕ ಕಿರಣ್ ಕಾರ್ಯಪ್ಪ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸುಮಾರು ೧೦.೨೦ಕ್ಕೆ ಅಧಿಕಾರಿಗಳ ತಂಡ ಆಗಮಿಸಿದೆ. ಆದರೆ ವೈದ್ಯರು ಬರಬೇಕೆಂಬ ಕಾರಣದಿಂದ ಅಪರಾಹ್ನ ೨.೩೦ರ ತನಕ ಕಾಯಬೇಕಾಯಿತು. ವೈದ್ಯರ ಆಗಮನದ ಬಳಿಕ ಅರೆವಳಿಕೆ ಗುಂಡು ನೀಡಿ ಕರಡಿ ಸೆರೆಗೆ ಸ್ಥಳಕ್ಕೆ ತೆರಳಿದಾಗ ಕರಡಿ ಅಲ್ಲಿಂದ ನಾಪತ್ತೆಯಾಗಿತ್ತು. ಇದಾದ ನಂತರ ಅರಣ್ಯ ಇಲಾಖೆಯವರು, ಸ್ಥಳೀಯರು ತೋಟದೊಳಗೆ ಹುಡುಕಾಟ ನಡೆಸಿದಾಗ ಕರಡಿ ಮತ್ತೆ ಕಂಡು ಬಂದಿದ್ದು, ಅರೆವಳಿಕೆ ಗುಂಡು ಹಾರಿಸಲಾಯಿತಾದರೂ ಅದು ಗುರಿ ತಪ್ಪಿದೆ. ಈ ಸಂದರ್ಭ ದಾಳಿಗೆ ಮುಂದಾದ ಕರಡಿ ಮತ್ತೆ ಪಲಾಯನಗೈದಿತ್ತು. ನಂತರದಲ್ಲಿ ಹುಡುಕಾಟ ಆರಂಭಿಸಿದಾಗ ಸುಮಾರು ೩.೪೫ರ ವೇಳೆಗೆ ಮತ್ತೆ ಕರಡಿ ಕಂಡು ಬಂದಿದ್ದು, ಈ ವೇಳೆ ಗುರಿ ಇಟ್ಟು ಅದನ್ನು ಪ್ರಜ್ಞೆ ತಪ್ಪಿಸಲಾಗಿದೆ.
ಕರಡಿಯನ್ನು ಸೆರೆ ಹಿಡಿಯಲು ಅಗತ್ಯವಾದ ಬಲೆ - ಬೋನ್ ಮತ್ತಿತರ ಸಾಮಗ್ರಿ ಸಹಿತವಾಗಿ ಆಗಮಿಸಿದ್ದ ಅರಣ್ಯ ಇಲಾಖಾ ತಂಡ ಸ್ಥಳೀಯರ ಸಹಕಾರದೊಂದಿಗೆ ಕೊನೆಗೂ ಕರಡಿಯನ್ನು ಸೆರೆ ಹಿಡಿದು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಇದನ್ನು ಸನಿಹದ ಅರಣ್ಯಕ್ಕೆ ಬಿಡಲಾಗಿದೆ ಎಂದು ತೋಟ ಮಾಲೀಕರು ತಿಳಿಸಿದ್ದಾರೆ.
ಕರಡಿ ಸಿಲುಕಿಕೊಂಡಿದ್ದ ಸ್ಥಳದಲ್ಲಿ ಭಾರೀ ಹಾನಿಯಾಗಿದೆ. ಅಲ್ಲದೆ ತೋಟವೂ ಜಖಂಗೊAಡಿದ್ದು, ಪರಿಹಾರಕ್ಕಾಗಿ ಮನವಿ ಮಾಡಲಾಗಿದೆ. ಆದರೆ ಕರಡಿಯನ್ನು ಸೆರೆ ಹಿಡಿದು ತೆರಳಿದ ಬಳಿಕ ಇತ್ತ ಕಡೆ ಯಾರೂ ಸುಳಿದಿಲ್ಲ ಎಂದು ಅವರು ವಿಷಾದಿಸಿದ್ದಾರೆ. ಅಂದು ದಿನವಿಡೀ ಕರಡಿ ಕಾರ್ಯಾಚರಣೆ ನಡೆದಿದ್ದು, ನೂರಾರು ಮಂದಿ ಕುತೂಹಲದೊಂದಿಗೆ ಸ್ಥಳದಲ್ಲಿ ಜಮಾಯಿಸಿದ್ದರು.