ಸೋಮವಾರಪೇಟೆ, ಡಿ. ೨೫: ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ರೈತರ ಸಮಸ್ಯೆಗಳನ್ನು ಅಧಿವೇಶನ ದಲ್ಲಿಯೇ ಬಗೆಹರಿಸಬೇಕೆಂದು ಆಗ್ರಹಿಸಿ ಕಳೆದ ೧೨ ದಿನಗಳಿಂದ ನಡೆಯುತ್ತಿರುವ ರೈತರ ಧರಣಿ, ಅಧಿವೇಶನ ಮುಗಿದರೂ ಅಂತ್ಯಕAಡಿಲ್ಲ.
ಬೆಳಗಾವಿ ಅಧಿವೇಶನದಲ್ಲಿಯೇ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂಬ ಬೇಡಿಕೆ ಮುಂದಿಟ್ಟು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಇಲ್ಲಿನ ಜೇಸೀ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಸದನದಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಬಾರದಿರುವ ಹಿನ್ನೆಲೆ ಚಳವಳಿಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ.
ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಒದಗಿಸುವಂತೆ ಶಾಸಕರುಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರೂ ಅಧಿಕೃತವಾಗಿ ಈ ಬಗ್ಗೆ ಯಾವುದೇ ಆದೇಶ ಹೊರಬಂದಿಲ್ಲ. ಈ ಹಿನ್ನೆಲೆ ಚಳವಳಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ತಾ. ೨೭ರವರೆಗೂ ರೈತ ಚಳವಳಿ ಮುಂದುವರೆಯಲಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ತಿಳಿಸಿದ್ದಾರೆ.
೧೩ನೇ ದಿನದ ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಕುಶಾಲಪ್ಪ, ದಯಾನಂದ, ಮಾಚಯ್ಯ, ಶಂಕರ ರಮಣ, ಜೋಯಪ್ಪ, ಮಚ್ಚಂಡ ಅಶೋಕ್, ಕಿಬ್ಬೆಟ್ಟ ಧರ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.