ಮಡಿಕೇರಿ, ಡಿ. ೨೬: ಕೃಷಿ ಇಲಾಖೆ ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಸಹಭಾಗಿತ್ವದೊಂದಿಗೆ ಸಂಪಾಜೆ ಸಹಕಾರ ಭವನದಲ್ಲಿ ರೋಜ್ ಗಾರ್ ದಿವಸ ಹಾಗೂ ಕೃಷಿ ವಿಸ್ತರಣೆಯ ಬಲವರ್ಧನೆ ಕಾರ್ಯಕ್ರಮ ನಡೆಯಿತು.

ನೈಸರ್ಗಿಕ ಕೃಷಿ ಕುರಿತು ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ರಿಯಾಜ್ ಅಹಮ್ಮದ್, ಕೃಷಿಕರು ಸಾವಯವ ಕೃಷಿಯತ್ತ ಹೆಚ್ಚು ಒಲವನ್ನು ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ, ಪಾರದರ್ಶಕವಾಗಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ-ನಾಟಿ ಮಾಡುವ ಉಪಕರಣಗಳು, ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ ರೈತರು ಹೆಚ್ಚು ಪ್ರಯೋಜನ ವನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಕೃಷಿ ವಿಜ್ಞಾನಿ ಡಾ. ಬಸವಲಿಂಗಯ್ಯ ಕೃಷಿ ವಿಸ್ತರಣಾ ಘಟಕ ಮಡಿಕೇರಿ ಅವರು, ಡ್ರಂ ಸೀಡರ್ ಕೃಷಿ ವಿಧಾನದ ಕುರಿತು ಮಾತನಾಡಿ, ಈ ವಿಧಾನದ ಮೂಲಕ ಕಡಿಮೆ ಖರ್ಚಿನಲ್ಲಿ ಭತ್ತ ಕೃಷಿ ಮಾಡಬಹುದು. ಭತ್ತವನ್ನು ೩೪ ಗಂಟೆ ನೆನೆಸಿ ಹೊರ ತೆಗೆದು, ಶಿಲೀಂಧ್ರ ನಾಶಕ ಕಾರ್ಬನ್ ಡೈಜಿಂನಲ್ಲಿ ಪ್ರತಿ ಕೆ.ಜಿ.ಗೆ ೪ ಗ್ರಾಂನAತೆ, ಮಿಶ್ರಣ ಮಾಡಿ, ೨೪-೩೬ ಗಂಟೆಗಳ ಕಾಲ ಗೋಣಿಚೀಲದಲ್ಲಿ ಕಟ್ಟಿ ನಂತರ ಬಿತ್ತನೆಗೆ ಉಪಯೋಗಿಸಬೇಕು ಎಂದು ಮಾಹಿತಿ ನೀಡಿದರು.

ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆಯ ಸ್ನೇಹ ಅವರು ಮೀನುಗಾರಿಕೆ ಇಲಾಖೆಯಿಂದ ಸಿಗುವ ಸಾಕಾಣಿಕೆ ಮರಿ ಮೀನು ಹಾಗೂ ಅದರ ಜೀವನ ನಿರ್ವಹಣೆ ಕುರಿತು ಮಾಹಿತಿಯನ್ನು ಒದಗಿಸಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮೀನುಗಾರಿಕೆಗೆ ಪ್ರಾಶಸ್ತö್ಯವಿದ್ದು ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕರಾದ ಅಕ್ಷಿತ ಮಾತನಾಡಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಒಳಗೊಡಂತೆ ವಿವಿಧ ಇಲಾಖೆಯ ಸಹಭಾಗಿತ್ವದೊಂದಿಗೆ ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ, ಮೀನುಗಾರಿಕೆ, ಪಶು ಸಂಗೋಪನೆ, ಎರೆಹುಳ ಗೊಬ್ಬರ ಘಟಕ, ಅಣಬೆ ಬೇಸಾಯ, ಇಂಗುಗುAಡಿ ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳಿದ್ದು ಜಾಬ್ ಕಾರ್ಡ್ ಹೊಂದಿದವರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಹಿತಿಯನ್ನು ಒದಗಿಸಿದರು.

ಕಾರ್ಯಕ್ರಮದಲ್ಲಿ ರವಿ ಕುಮಾರ್ ಯೋಜನಾ ಉಪ ನಿರ್ದೇಶಕರು ಕೊಡಗು ಜಿಲ್ಲೆ, ವರದರಾಜ್ ಎಂ.ವಿ. ಕೃಷಿ ಅಧಿಕಾರಿ ಸಂಪಾಜೆ ಹೋಬಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಪಾಜೆ, ಸದಸ್ಯರು, ಪಂಚಾಯಿತಿ ಸಿಬ್ಬಂದಿ ಹಾಗೂ ಸಂಪಾಜೆ ಹೋಬಳಿ ಕೃಷಿಕರು ಉಪಸ್ಥಿತರಿದ್ದರು.