ಮಡಿಕೇರಿ, ಡಿ. ೨೪: ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ೨ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷ ಗೆಲುವು ಸಾಧಿಸಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಮಾವೇಶ, ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮೇಕೆದಾಟು ಯೋಜನೆ ಅನುಷ್ಠಾನ ಸಂಬAಧ ನಡೆಯುವ ಪಾದಯಾತ್ರೆ ಕುರಿತ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿಶೀಲ ಕರ್ನಾಟಕಕ್ಕೆ ಶಕ್ತಿ ತುಂಬಬೇಕು ಎಂಬ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನೀರಿಗಾಗಿ ಯುದ್ಧ ನಡೆದಿದೆ. ಕಾವೇರಿ ನೀರನ್ನು ಕರ್ನಾಟಕ ಸೇರಿದಂತೆ ಅನೇಕ ರಾಜ್ಯದ ಜನರು ಹಾಗೂ ರೈತರು ಅವಲಂಬಿಸಿದ್ದಾರೆ. ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ೬೪ ಟಿ.ಎಂ.ಸಿ. ನೀರು ಸಮುದ್ರಕ್ಕೆ ಹರಿದು ಹೋಗಿದೆ. ಅಣೆಕಟ್ಟು ಇದ್ದಿದ್ದರೆ ನೀರು ವ್ಯರ್ಥವಾಗದೆ ಸೂಕ್ತವಾಗಿ ಬಳಕೆ ಯಾಗುತಿತ್ತು. ಈ ಯೋಜನೆಯಿಂದ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಹಾಗೂ ಜನರಿಗೆ ಅನುಕೂಲವಾಗುತ್ತದೆ. ನೀರಿನ ಬವಣೆ ತೀರುತ್ತದೆ ಎಂದ ಅವರು, ಮೇಕೆದಾಟಿನಿಂದ ಬೆಂಗಳೂರಿನ ತನಕ ಸಾಗುವ

(ಮೊದಲ ಪುಟದಿಂದ) ಪಾದಯಾತ್ರೆ ದಿನನಿತ್ಯ ೧೫ ಕಿ.ಮೀ. ನಡೆಯಲಿದೆ ಎಂದು ತಿಳಿಸಿದರು.

ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಕೊಡಗು ಜಿಲ್ಲೆ ನೀಡಿದ ಕೊಡುಗೆ ಅಪಾರ ಎಂದು ಡಿ.ಕೆ.ಶಿವಕುಮಾರ್ ಬಣ್ಣಿಸಿದರು. ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯರಂತಹ ಮಹಾನ್ ಸೇನಾನಿಗಳನ್ನು ನೀಡಿದ ಜಿಲ್ಲೆ ಇದಾಗಿದೆ. ಆದರೆ, ಕೊಡಗು ಜಿಲ್ಲೆ ಅನೇಕ ಜ್ವಲಂತ ಸಮಸ್ಯೆಗಳನ್ನು ಅನುಭವಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ಎಲ್ಲ ವರ್ಗದವರ ರಕ್ಷಣೆ ಮಾಡಬಲ್ಲ ಪಕ್ಷ ಕಾಂಗ್ರೆಸ್ ಆಗಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಗೆ ಜಿಲ್ಲಾ ಕಾಂಗ್ರೆಸ್ ಆದ್ಯತೆ ನೀಡಬೇಕು. ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಬೇಕು. ಸದಸ್ಯತ್ವ ನೋಂದಣಿ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಹೇಳಿದರು.

ಕೊಡಗು ಜಿಲ್ಲೆ ಎ.ಕೆ. ಸುಬ್ಬಯ್ಯ ಹಾಗೂ ಎಂ.ಸಿ. ನಾಣಯ್ಯ ಅವರಂತಹ ಅತ್ಯದ್ಭುತ ಸಂಸದೀಯ ಪಟುಗಳನ್ನು ನೀಡಿದೆ. ಅವರಿಂದ ನಾನು ರಾಜಕಾರಣ ಕಲಿತಿದ್ದೇನೆ. ಅಬಕಾರಿ ಕಾಯ್ದೆ ಬದಲಾವಣೆಯಲ್ಲಿ ಎಂ.ಸಿ. ನಾಣಯ್ಯ ಅವರ ಪಾತ್ರ ದೊಡ್ಡದಿದೆ. ನಾನು ಅವರ ದೊಡ್ಡ ಅಭಿಮಾನಿ ಎಂದರು.

ಶಿಸ್ತು ಕ್ರಮದ ಎಚ್ಚರಿಕೆ

ಚುನಾವಣೆ ಸಂದರ್ಭ ಇಲ್ಲಸಲ್ಲದ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತಂದರೆ ಶಿಸ್ತು ಕ್ರಮವಹಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಸಿದರು. ನಮಗೆ ಪಕ್ಷ ಮುಖ್ಯವಾಗಿರಬೇಕು ಹೊರತು ವ್ಯಕ್ತಿಯಲ್ಲ. ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದಾರೆ. ಇದನ್ನು ಅರಿತು ಮುನ್ನಡೆಯಬೇಕೆಂದರು.

ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಧ್ರ‍್ರುವನಾರಾಯಣ ಮಾತನಾಡಿ, ಕೊಡಗು ಜಿಲ್ಲೆ ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸಾವಿರಾರು ಯೋಧರು ದೇಶದ ಒಳಿತಿಗೆ ದುಡಿದಿದ್ದಾರೆ. ಕ್ರೀಡೆಯಲ್ಲೂ ಸಾಧನೆ ತೋರಿದ್ದಾರೆ. ಕಾವೇರಿ ಉಗಮ ಸ್ಥಳದಲ್ಲಿ ಕಾವೇರಿ ತಾಯಿಯ ಆಶೀರ್ವಾದ ಪಡೆದು ಪಾದಯಾತ್ರೆಗೆ ಮುನ್ನುಡಿ ಬರೆಯಲಾಗಿದೆ. ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರವಿದ್ದಾಗ ಡಿ.ಪಿ.ಆರ್. ತಯಾರಿಸಲಾಗಿತ್ತು. ಇದೀಗ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪರಿಸರ ಇಲಾಖೆಯ ಅನುಮೋದನೆ ಬಾಕಿ ಇದೆ. ರಾಜ್ಯದಲ್ಲಿ ೫೦ ಸಾವಿರ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಕೊಡಗು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ವಿಪುಲ ಅವಕಾಶವಿದೆ. ಇದನ್ನು ಕಾರ್ಯಕರ್ತರು ಬಳಸಿಕೊಳ್ಳಬೇಕು. ವಿಧಾನ ಪರಿಷತ್ ಚುನಾವಣೆ ಸಂದರ್ಭ ಕೊಡಗಿನಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದೆ. ಸಂಘಟಿತ ಪ್ರದರ್ಶನದಿಂದ ಇದು ಸಾಧ್ಯವಾಗಿದೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ಪಕ್ಷ ಸಾಮಾಜಿಕವಾಗಿ ತೊಡಗಿಸಿಕೊಂಡಿತು. ಜನರ ಸಂಕಷ್ಟಕ್ಕೆ ತ್ವರಿತವಾಗಿ ಮಿಡಿಯುವ ಮೂಲಕ ಜನಪರವಾಗಿ ನಡೆದುಕೊಂಡಿದೆ ಎಂದರು.

ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ಜೀವನಾಡಿಯಾಗಿರುವ ಕಾವೇರಿಯ ಹಿತ ಕಾಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮೇಕೆದಾಟು ಯೋಜನೆಯಿಂದ ಉಭಯ ರಾಜ್ಯಗಳಿಗೆ ಲಾಭವಾಗಲಿದೆ. ಇದರಿಂದ ಸಮಸ್ಯೆಗಳು ದೂರವಾಗಲಿವೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ೧೧೫ ಕ್ಷೇತ್ರಕ್ಕಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲಬೇಕು. ಕಾರ್ಯಕರ್ತರ ಹಾಗೂ ಮುಖಂಡರುಗಳ ನಡುವೆ ಇರುವ ಭಿನ್ನಾಭಿಪ್ರಾಯ ದೂರವಾಗಬೇಕು. ಜಾತ್ಯತೀತ ಪಕ್ಷಗಳು ಒಂದಾಗಿ ಕೋಮುವಾದಿ ಪಕ್ಷವಾಗಿರುವ ಬಿಜೆಪಿಯನ್ನು ಸೋಲಿಸಬೇಕೆಂದು ಕರೆ ನೀಡಿದರು.

ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ಅಣೆಕಟ್ಟು ನಿರ್ಮಾಣವಾಗುವ ತನಕ ಹೋರಾಟಕ್ಕೆ ಕೈಜೋಡಿಸುತ್ತೇವೆ. ಇದೀಗ ಕಾಂಗ್ರೆಸ್‌ನಲ್ಲಿ ಹೊಸ ಉತ್ಸಾಹ, ಹುರುಪು ಬಂದಿದೆ. ಎಂ.ಎಲ್.ಸಿ. ಚುನಾವಣೆಯಲ್ಲಿ ಸಂಘಟಿತ ಪ್ರಯತ್ನವಾಗಿದೆ. ಮುಂದಿನ ಜಿ.ಪಂ ಹಾಗೂ ತಾ.ಪಂ. ಚುನಾವಣೆಯಲ್ಲಿಯೂ ಹೆಚ್ಚುವ ಸ್ಥಾನ ಗೆಲ್ಲುವ ವಿಶ್ವಾಸವಿದೆ. ೨೦೨೩ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಪಕ್ಷ ಸದೃಢವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಡಾ.ಮಂತರ್ ಗೌಡ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ. ಈ ರೀತಿ ಕಾರ್ಯಚಟುವಟಿಕೆ ಮುಂದುವರೆಸಿದ್ದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಕಾAಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಪ್ರಾಸ್ತವಿಕವಾಗಿ ಮಾತನಾಡಿ, ಕೊಡಗು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಚುನಾವಣೆಯಲ್ಲಿ ಕೆಲ ವರ್ಷಗಳಿಂದ ಸೋಲು ಕಂಡಿದ್ದೇವೆ. ಇದಕ್ಕೆ ಭಿನ್ನಾಬಿಪ್ರಾಯಗಳು ಕಾರಣವಾಗಿದ್ದವು. ಇದೀಗ ಅದನ್ನು ಮರೆತಿದ್ದೇವೆ. ಸಂಘಟನೆಗೆ ಒತ್ತು ನೀಡಿದ್ದೇವೆ. ಮುಂದಿನ ಎಲ್ಲಾ ರೀತಿಯ ಚುನಾವಣೆಯನ್ನು ಗೆಲ್ಲುವ ವಿಶ್ವಾಸವಿದೆ. ಎಂ.ಎಸ್.ಸಿ. ಚುನಾವಣೆ ಬಳಿಕ ಪಕ್ಷದ ಶಕ್ತಿ ಅನಾವರಣವಾಗಿದೆ ಎಂದರು.

ಸಭೆಗೂ ಮುನ್ನ ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸಿಡಿಎಸ್ ಜ. ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ ಮಡಿದ ಯೋಧರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ನಗರದ ಜ. ತಿಮ್ಮಯ್ಯದಿಂದ ಡಿ.ಕೆ. ಶಿವಕುಮಾರ್, ಕಾರ್ಯಕರ್ತರ ಸಹಿತ ಮೆರವಣಿಗೆ ನಡೆಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ, ಬಿ.ಎ. ಜೀವಿಜಯ, ಕೆ.ಎಂ. ಇಬ್ರಾಹಿಂ, ಮಾಜಿ ಮುಖ್ಯ ಸಚೇತಕ ವೆಂಕಟೇಶ್, ಮಂಡ್ಯ ಎಂಎಲ್‌ಸಿ ದಿನೇಶ್ ಗೂಳಿಗೌಡ, ಹಿರಿಯ ಮುಖಂಡ ಚಂದ್ರಮೌಳಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್, ಐಶ್ವರ್ಯ, ಕೆ.ಪಿ.ಸಿ.ಸಿ. ವೀಕ್ಷಕಿ ಮಂಜುಳಾ ರಾಜ್, ಮೆಹರೋಜ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.