ಮಡಿಕೇರಿ, ಡಿ. ೨೪: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಉದ್ದೇಶಿಸಿರುವ ಪಾದಯಾತ್ರೆ ಯಶಸ್ವಿಯಾಗಲೆಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಾವೇರಿ ಉಗಮಸ್ಥಳವಾದ ತಲಕಾವೇರಿ ಹಾಗೂ ಭಾಗಮಂಡಲದ ಭಗಂಡೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.

ಡಿ.ಕೆ.ಶಿವಕುಮಾರ್ ಅವರಿಗೆ ಸೂತಕ ಹಿನ್ನೆಲೆ ತಲಕಾವೇರಿ ಕ್ಷೇತ್ರದ ಕೊಳದ ಮುಂಭಾಗದಲ್ಲಿ ಕುಳಿತು ದೇವರ ದರ್ಶನ ಪಡೆದರು. ಅವರ ಬೆಂಬಲಿಗರು ಮಹಾಸಂಕಲ್ಪ ಪೂಜೆ, ವಿಶೇಷ ಪೂಜೆಯನ್ನು ನೆರವೇರಿಸಿದರು. ಇದಕ್ಕೂ ಮುನ್ನ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಗೆ ತೆರಳಿ ದರ್ಶನ ಪಡೆದರು.

ತಲಕಾವೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾವೇರಿಯಿಂದ ರಾಜ್ಯದ ೩ ಕೋಟಿಗೂ ಹೆಚ್ಚು ಜನರಿಗೆ ಹಾಗೂ ತಮಿಳುನಾಡಿನ ರೈತರಿಗೂ ಅನುಕೂಲವಾಗುತ್ತಿದೆ. ಈ ನೀರಿನ ಬಳಕೆ ವಿಚಾರವಾಗಿ ಬೇಕಾದಷ್ಟು ಹೋರಾಟಗಳು ನಡೆದಿವೆ. ಹಲವು ಮಹನೀಯರು

(ಮೊದಲ ಪುಟದಿಂದ) ಇದಕ್ಕಾಗಿ ಹೋರಾಟ, ತ್ಯಾಗ ಮಾಡಿ ನ್ಯಾಯ ಕೊಡಿಸಿದ್ದಾರೆ. ನ್ಯಾಯಾಲಯದಿಂದ ಅನೇಕ ತೀರ್ಪುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿಯಿAದ ಎಷ್ಟು ಪ್ರಮಾಣದ ನೀರನ್ನು ನಮ್ಮ ರೈತರು ಬಳಸಬೇಕು, ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರು ನೀಡಬೇಕು ಎಂಬ ತೀರ್ಮಾನವೂ ಆಗಿದೆ. ಆದರೆ, ಹತ್ತಾರೂ ವರ್ಷಗಳಿಂದ ೧೦೪ ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಸೇರುತ್ತಿದೆ. ಹೀಗಾಗಿ ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಸಮತೋಲಿತ ಅಣೆಕಟ್ಟೆ ಯೋಜನೆ ಮಾಡಬೇಕು, ಎರಡು ರಾಜ್ಯಕ್ಕೂ ನ್ಯಾಯ ಸಿಗಬೇಕು ಎಂಬ ಒತ್ತಾಸೆ ಇದೆ. ಹೀಗಾಗಿ ಮೇಕೆದಾಟು ಅಣೆಕಟ್ಟು ಕಟ್ಟಬೇಕು, ಸಮತೋಲಿತ ಯೋಜನೆ ಆಗಬೇಕು, ಅದರಿಂದ ವಿದ್ಯುತ್ ಉತ್ಪಾದನೆ, ಬೆಂಗಳೂರು ಮಹಾನಗರದ ಒಂದೂವರೆ ಕೋಟಿ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ಪೂರೈಕೆಯಾಗಬೇಕು, ಮಳೆ ಕೊರತೆಯಾದ ಸಮಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ತುಮಕೂರು, ಕೋಲಾರ, ರಾಮನಗರ ಪ್ರದೇಶದ ರೈತರಿಗೆ ನೀರು ಒದಗಿಸುವುದು, ಹಾಗೂ ತಮಿಳುನಾಡಿಗೂ ೬೬ ಟಿಎಂಸಿ ನೀರನ್ನು ಬಿಡುವ ಯೋಜನೆ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದರು.

ಸುಮಾರು ೯,೯೦೦ ಕೋಟಿ ರೂ. ಮೊತ್ತದ ಈ ಯೋಜನೆಯ ವಿಸ್ಕೃತ ವರದಿಯ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದೆ. ಸುಪ್ರೀಂ ಕೋರ್ಟ್ ಕುಡಿಯುವ ನೀರಿನ ವ್ಯವಸ್ಥೆಗೆ ಯಾರ ಅಡಚಣೆಯೂ ಬೇಡ ಎಂದು ಹೇಳಿದೆ. ನೀರಾವರಿ ಸಚಿವರಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅನುಮೋದನೆ ನೀಡಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಒಪ್ಪಿಗೆ ಮಾತ್ರ ಸಿಗಬೇಕಿದೆ. ಅದು ಸಿಕ್ಕ ತಕ್ಷಣ ನಾವು ಯೋಜನೆ ಆರಂಭಿಸಬಹುದು. ಈ ಯೋಜನೆಗೆ ಅಗತ್ಯವಿರುವ ಸಣ್ಣ ಪ್ರಮಾಣದ ಭೂಮಿಯನ್ನು ಈಗಲೇ ಪಡೆಯಬಹುದಾಗಿದೆ. ಇದಕ್ಕೆ ಕನಕಪುರ ಹಾಗೂ ಮಳವಳ್ಳಿಯಲ್ಲಿ ಸ್ವಲ್ಪ ಭಾಗದ ಜಮೀನು ಬೇಕಾಗಿದೆ. ಅದನ್ನು ಬಿಟ್ಟರೆ ಉಳಿದೆಲ್ಲವೂ ಅರಣ್ಯ ಭೂಮಿ ಒಳಪಡುತ್ತದೆ. ಕನಕಪುರದ ನಮ್ಮ ಜನ ರಾಜ್ಯದ ಹಿತದೃಷ್ಟಿಗೆ ತಮ್ಮ ಜಮೀನು ನೀಡಲು ಬದ್ಧತೆ ಹೊಂದಿದ್ದಾರೆ ಎಂದು ಹೇಳಿದರು.

ಈ ಯೋಜನೆ ಕೂಡಲೇ ಆರಂಭವಾಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಾಯ ಹಾಕಲು ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ೨೦೨೨ ರ ಜನವರಿ ೯ ರಿಂದ ಈ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಈ ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಸಂಕಲ್ಪ. ಜನರಿಗೆ ಕುಡಿಯುವ ನೀರು ನೀಡಬೇಕು, ಪವಿತ್ರ ನೀರು ಸದುಪಯೋಗ ಆಗಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ. ಇದರಿಂದ ೪೦೦ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯೂ ಆಗಲಿದೆ. ಎಲ್ಲ ರೀತಿಯಲ್ಲೂ ಅನುಕೂಲವಾಗುವ ಯೋಜನೆ ಇದಾಗಿದೆ. ಇದಕ್ಕೆ ಪಕ್ಷಾತೀತವಾಗಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ಕೊಡಗು ಜಿಲ್ಲಾಧ್ಯಕ್ಷ ತೀತಿರ ಧರ್ಮಜ, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಎಂಎಲ್‌ಸಿ ಪರಾಜಿತ ಅಭ್ಯರ್ಥಿ ಡಾ. ಮಂತರ್ ಗೌಡ, ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ, ಹಿರಿಯ ಮುಖಂಡರುಗಳಾದ ಹೆಚ್.ಎಸ್. ಚಂದ್ರಮೌಳಿ, ಬಿದ್ದಾಟಂಡ ತಮ್ಮಯ್ಯ, ಕದ್ದಣಿಯಂಡ ಹರೀಶ್, ಎಐಸಿಸಿ ವಕ್ತಾರ ಬ್ರಿಜೇಷ್ ಕಾಳಪ್ಪ, ಯುವಘಟಕದ ಜಿಲ್ಲಾಧ್ಯಕ್ಷ ಮಿಥುನ್ ಹಾನಗಲ್, ಡಾ.ಮಂತರ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.