ಗೋಣಿಕೊಪ್ಪಲು, ಡಿ. ೨೫: ಕಿಡಿಗೇಡಿ ಗಳು ರಾತ್ರಿಯ ವೇಳೆ ಪ್ರಾಚೀನ ಕಾಲದ ಗಣಪತಿ ವಿಗ್ರಹವನ್ನು ಭಗ್ನಗೊಳಿಸಿದ ಘಟನೆ ದ. ಕೊಡಗಿನ ಕಾನೂರು ಪಂಚಾಯಿತಿ ವ್ಯಾಪ್ತಿಯ ಕೋತೂರು ವನ ಭದ್ರಕಾಳಿ ದೇವಾಲಯದಲ್ಲಿ ನಡೆದಿದೆ.
ದೇವಾಲಯ ಅರ್ಚಕರು ಪ್ರತಿ ಶುಕ್ರವಾರ ಮುಂಜಾನೆಯ ಸಮಯದಲ್ಲಿ ಪೂಜೆಗೆ ತೆರಳಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಗ್ರಾಮದ ಮಾರಮ್ಮ ದೇವಾಲಯ ಸಮಿತಿಯ ಪದಾಧಿಕಾರಿಗಳು ಕುಟ್ಟ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿ, ಕಿಡಿಗೇಡಿಗಳನ್ನು ಬಂಧಿಸುವAತೆ ಆಗ್ರಹಿಸಿದ್ದಾರೆ. ಡಿವೈಎಸ್ಪಿ ಜಯಕುಮಾರ್ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ, ಕುಟ್ಟ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಚಂದ್ರಪ್ಪ ಭೇಟಿ ನೀಡಿ ವಿರೂಪಗೊಂಡ ವಿಗ್ರಹವನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಸುಮಾರು ೨೦೦ ವರ್ಷಗಳ ಇತಿಹಾಸವಿರುವ ಪ್ರಾಚೀನ ಕಾಲದ ಗಣಪತಿ ವಿಗ್ರಹ ಅಪರೂಪದ್ದಾಗಿದ್ದು, ಊರಿನ ಅರ್ಚಕರು ಪ್ರತಿ ಶುಕ್ರವಾರ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.
(ಮೊದಲ ಪುಟದಿಂದ) ನೆಮ್ಮದಿಯಾಗಿರುವ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಈ ರೀತಿಯ ಕೃತ್ಯ ನಡೆಸಿದ್ದಾರೆ.
ದೇವಾಲಯ ಆವರಣದಲ್ಲಿ ಭಂಡಾರ ಪೆಟ್ಟಿಗೆ ಇದ್ದರೂ ಇದನ್ನು ಮುಟ್ಟುವ ಹಾಗೂ ಕದಿಯುವ ಪ್ರಯತ್ನ ನಡೆದಿಲ್ಲ. ಹೀಗಾಗಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ರೀತಿಯಲ್ಲಿ ಪ್ರಯತ್ನ ನಡೆದಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸುವAತೆ ಊರಿನ ಮುಖಂಡ ಕಾಡ್ಯಮಾಡ ಭರತ್ ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರವಾಣಿ ಮೂಲಕ ಡಿವೈಎಸ್ಪಿ ಜಯಕುಮಾರ್ ಅವರನ್ನು ಸಂಪರ್ಕಿಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವAತೆ ಹಾಗೂ ಇಂತಹ ಪ್ರಕರಣ ಮರು ಕಳಿಸದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.
ದ. ಕೊಡಗಿನ ವಿವಿಧ ದೇವಾಲಯದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಕುಂದ ಗ್ರಾಮದ ಮಹಾದೇವರ ದೇವಾಲಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.ಇಂತಹ ಘಟನೆ ಪುನರಾವರ್ತನೆ ಆಗದಂತೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್ ಒತ್ತಾಯಿಸಿದ್ದಾರೆ.
ಭೇಟಿ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮುಖಂಡರಾದ ಅರುಣ್ ಭೀಮಯ್ಯ, ಚಲನ್ ಕುಮಾರ್, ಅಚ್ಚಪಂಡ ಮಹೇಶ್, ಚೆಪ್ಪುಡೀರ ಮಾಚಯ್ಯ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
- ಹೆಚ್.ಕೆ. ಜಗದೀಶ್