ನಾಪೋಕ್ಲು, ಡಿ. ೨೫: ಕೊಡವ ಕುಟುಂಬಗಳ ನಡುವಿನ ಚೌರಿರ ಕಪ್ ಹಾಕಿ ಮತ್ತು ಫುಟ್ಬಾಲ್ ಕ್ರೀಡಾಕೂಟಕ್ಕೆ ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.

ಕೋವಿಡ್ ೧೯ರ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ಕೌಟುಂಬಿಕ ಹಾಕಿ ನಡೆಯುತ್ತಿಲ್ಲ. ಸ್ಥಗಿತಗೊಂಡಿದ್ದ ಕ್ರೀಡಾಕೂಟಗಳಿಂದ ಕ್ರೀಡಾಪಟುಗಳಿಗೆ ಹೆಚ್ಚಿನ ನಿರಾಸೆ ಉಂಟಾಗಿತ್ತು. ಇದೀಗ ಚೌರಿರ ಕುಟುಂಬಸ್ಥರು ಆರಂಭಿಸಿದ ಈ ಕ್ರೀಡಾಕೂಟ ಕ್ರೀಡಾಪಟುಗಳಿಗೆ, ಕ್ರೀಡಾಪ್ರೇಮಿಗಳಿಗೆ ಹೆಚ್ಚಿನ ಹುರುಪು ನೀಡಿದಂತಾಗಿದೆ. ಹಾಕಿಗೆ ೯೦ ಮತ್ತು ಫುಟ್ಬಾಲ್‌ಗೆ ೫೬ ಕುಟುಂಬಗಳು ಹೆಸರು ನೊಂದಾಯಿಸಿಕೊಳ್ಳುವದರ ಮೂಲಕ ಕ್ರೀಡಾ ಪ್ರೇಮವನ್ನು ಮೆರೆದಿದ್ದಾರೆ. ಇದೊಂದು ಮಿನಿ ಹಾಕಿ ಉತ್ಸವದಂತೆ ಜರುಗಲಿದೆ.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕೊರೊನಾ ಹಿನ್ನಲೆಯಲ್ಲಿ ಕಳೆದ ಎರಡುವರೆ ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯಬೇಕಾಗಿದ್ದ ಎಲ್ಲಾ ಕ್ರೀಡಾಕೂಟಗಳು ಸ್ಥಗಿತಗೊಂಡಿತ್ತು. ಈಗ ಕೊರೊನಾ ಪ್ರಮಾಣ ಕಡಿಮೆಯಾದ ಕಾರಣ ಅಲ್ಲಲ್ಲಿ ಕ್ರೀಡಾಕೂಟಗಳು ಆರಂಭಗೊಳ್ಳುತ್ತಿವೆ. ಆದರೆ, ಮತ್ತೆ ಕೋವಿಡ್, ಓಮಿಕ್ರಾನ್ ಹರಡುವ ಪ್ರಮಾಣ ಹೆಚ್ಚಾಗುತ್ತಿದೆ. ಈ ಬಗ್ಗೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಲಾಕ್‌ಡೌನ್ ಆದರೆ ಜನ ಸಾಮಾನ್ಯರಿಗೆ ಸಮಸ್ಯೆ ಆಗುವದರೊಂದಿಗೆ ಆರ್ಥಿಕವಾಗಿ ಹೆಚ್ಚಿನ ತೊಂದರೆಯಾಗಲಿದೆ. ಆದುದರಿಂದ ಮುನ್ನೆಚ್ಚರಿಕೆ ಅಗತ್ಯ ಎಂದು ಸಲಹೆ ನೀಡಿದರು.

(ಮೊದಲ ಪುಟದಿಂದ) ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಹಾಗೂ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಮಾತನಾಡಿ, ಕೊಡಗು ಜಿಲ್ಲೆಗೆ ಕ್ರೀಡಾ ವಿಶ್ವವಿದ್ಯಾನಿಲಯದ ಅಗತ್ಯವಿದೆ. ದೇಶದಲ್ಲಿ ಮಣಿಪುರದಲ್ಲಿ ಮಾತ್ರ ಕ್ರೀಡಾ ವಿಶ್ವವಿದ್ಯಾನಿಲಯ ಇದೆ. ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗಿನ ಮುಖಂಡರ ತಂಡದೊAದಿಗೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರಕಾರದ ಅನುಮತಿಯ ಮೇರೆಗೆ ಕೊಡಗಿಗೆ ವಿಶ್ವವಿದ್ಯಾನಿಲಯ ಮಂಜೂರು ಮಾಡುವ ಭರವಸೆಯನ್ನು ಯಡಿಯೂರಪ್ಪ ಅವರು ನೀಡಿದ್ದರು. ಇತ್ತೀಚೆಗೆ ಈ ಬಗ್ಗೆ ಕ್ರೀಡಾ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಂಬAಧಿಸಿದAತೆ, ಕೂಡಿಗೆ ಬಳಿ ೩೦೦ ಏಕರೆ ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ ಎಂದ ಅವರು ಈ ಬಾರಿಯ ಬಜೆಟ್‌ನಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುಮೋದನೆ ದೊರೆಯಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕ್ರೀಡೆ ಕೊಡವರಿಗೆ ರಕ್ತಗತವಾಗಿ ಬಂದಿದೆ. ಕೊಡವರನ್ನು ಒಗ್ಗೂಡಿಸುವ ಕಾರ್ಯವನ್ನು ಕ್ರೀಡಾಕೂಟಗಳು ಮಾಡುತ್ತಿದೆ. ಕೊರೊನಾ ಕಾರಣದಿಂದ ನಿಂತು ಹೋಗಿದ್ದ ಕ್ರೀಡಾಕೂಟಕ್ಕೆ ಜೀವ ತುಂಬುವ ಕೆಲಸವನ್ನು ಚೌರಿರ ಕುಟುಂಬಸ್ಥರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಹಾಕಿ ಎಂದರೆ ಕೊಡಗು. ಕೊಡಗು ಹಾಕಿ ಕ್ರೀಡೆಯ ಮೆಟ್ಟಿಲು. ಇಲ್ಲಿನ ಮಕ್ಕಳಿಗೆ ಹೆಚ್ಚಿನ ಪ್ರತಿಭೆ ಇದೆ. ಆದರೆ, ಪ್ರೋತ್ಸಾಹ ಕಡಿಮೆಯಿದೆ. ಆದುದರಿಂದ ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರೋತ್ಸಾಹ ದೊರೆತರೆ ಇನ್ನೂ ಹೆಚ್ಚಿನ ಸಾಧನೆಯೊಂದಿಗೆ ಕೊಡಗಿನ ಕೀರ್ತಿ ಹೆಚ್ಚಾಗಲಿದೆ ಎಂದರು.

ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಮಾತನಾಡಿ, ಕ್ರೀಡಾಕೂಟ ನಡೆಯುತ್ತಿರುವ ಕ್ರೀಡಾಂಗಣವನ್ನು ದಾನಿಗಳು ವಿದ್ಯಾಸಂಸ್ಥೆಗೆ ನೀಡಿದ್ದಾರೆ. ದಾನಿಗಳು ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಿದರೆ ವಿದ್ಯಾರ್ಥಿಗಳು ಕ್ರೀಡೆ ಮತ್ತು ಕ್ರೀಡೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಹಾಕಿ ಕೂರ್ಗ್ ಸಂಸ್ಥೆಯ ಪದಾಧಿಕಾರಿಗಳು, ಮತ್ತಿತರರು ಇದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೌರ ಕುಟುಂಬದ ಅಧ್ಯಕ್ಷ ಕೆ.ಪೂವಯ್ಯ ವಹಿಸಿದ್ದರು. ಚೌರಿರ ಕಾವೇರಿ ಪೂವಯ್ಯ ಪ್ರಾರ್ಥನೆ, ಮಾಳೇಟಿರ ಶ್ರೀನಿವಾಸ್ ನಿರೂಪಿಸಿ, ಚೌರಿರ ಉದಯ ಸ್ವಾಗತಿಸಿ, ವಂದಿಸಿದರು.

-ಪಿ.ವಿ. ಪ್ರಭಾಕರ್