ಮಡಿಕೇರಿ, ಡಿ. ೨೫: ಪ್ರಸಕ್ತ ವರ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿ ಪ್ರಕಟಗೊಂಡಿದೆ. ಇದರಲ್ಲಿ ಕೊಡಗಿನ ಶಕ್ತಿ ದಿನಪತ್ರಿಕೆಗೂ ಪ್ರಶಸ್ತಿ ಲಭಿಸಿದೆ. ‘ಶಕ್ತಿ’ ಪರವಾಗಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರನ್ನು ರಾಜಶೇಖರ ಕೋಟಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೊಡಗಿನ ಮತ್ತೊಬ್ಬ ಪತ್ರಕರ್ತ ‘ಕನ್ನಡಪ್ರಭ’ ದಿನಪತ್ರಿಕೆಯ ವರದಿಗಾರ ಮೂಲತಃ ಶಾಂತಳ್ಳಿಯವರಾದ ಈಗ ಸೋಮವಾರಪೇಟೆಯಲ್ಲಿ ಕನ್ನಡಪ್ರಭ ವರದಿಗಾರರಾಗಿರುವ ಎಸ್.ಎ. ಮುರಳೀಧರ ಅವರಿಗೆ ಮಂಡಿಬೆಲೆ ಶಾಮಣ್ಣ ಪ್ರಶಸ್ತಿಯನ್ನು ಘೋಷಿಸಲಾಗಿದೆ. ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸುದೀರ್ಘ ಸೇವೆಗಾಗಿ ಸಂಸ್ಥೆಯ ಪರವಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುರಳೀಧರ ಅವರು ಕನ್ನಡಪ್ರಭದಲ್ಲಿ ‘ಕುಡಿಗಾಣ ಜನರ ಬದುಕು ಅತಂತ್ರ’ ಎಂಬ ಗ್ರಾಮೀಣ ವರದಿ ಮಾಡಿದುದಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

‘ಶಕ್ತಿ’ಗೆ ರಾಜ್ಯ ಪ್ರಶಸ್ತಿಯ ಗರಿ

(ಮೊದಲ ಪುಟದಿಂದ) ೮೦೦ಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತರನ್ನು ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿ ವರ್ಷವೂ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ವೃತ್ತಿ ಬಾಂಧವರ ಸೇವೆ ಮತ್ತು ಕ್ರಿಯಾಶೀಲತೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ರಾಜ್ಯದಲ್ಲಿ ಇನ್ನೂ ಅನೇಕ ಪತ್ರಕರ್ತರು ದತ್ತಿನಿಧಿ ಹಾಗೂ ವಿಶೇಷ ವರದಿಗಳು ಮೊದಲಾದ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಕೊಡಗಿನಿಂದ ಇಬ್ಬರು ಮಾತ್ರ ಆಯ್ಕೆಗೊಂಡಿದ್ದಾರೆ.

ಈ ಎಲ್ಲಾ ಪ್ರಶಸ್ತಿಗಳನ್ನು ಕಲ್ಯಾಣ ಕರ್ನಾಟಕ ಭಾಗದ ತೊಗರಿಬೀಡು ಖ್ಯಾತಿಯ ಕಲಬುರ್ಗಿಯಲ್ಲಿ ನಡೆಯಲಿರುವ ಸಂಘದ ೩೬ನೇ ರಾಜ್ಯ ಸಮ್ಮೇಳನ ಸಂದರ್ಭ ನೀಡಲಾಗುತ್ತದೆ. ಜನವರಿ ೪ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.