ಮುಳ್ಳೂರು, ಡಿ. ೨೪: ಮೈಸೂರಿನ ಓಡಿಪಿ ಸಾಂತ್ವನ ಕೇಂದ್ರ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಮೀಪದ ನಿಡ್ತ ಗ್ರಾ.ಪಂ. ಸಭಾಂಗಣದಲ್ಲಿ ಸಂಜೀವಿನಿ ಗ್ರಾಮಮಟ್ಟದ ಒಕ್ಕೂಟ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಕುರಿತು ಸಾಂತ್ವನ ಕೇಂದ್ರದ ಕಾರ್ಯಕರ್ತೆ ಡಿ.ಪಿ. ಜಯಶ್ರೀ ಮಾಹಿತಿ ನೀಡಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ, ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆ, ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳ, ಆತ್ಮಹತ್ಯೆ ಮನಸ್ಥಿತಿ ಮುಂತಾದ ಹಲವಾರು ರೀತಿಯಲ್ಲಿ ನೊಂದ ಮಹಿಳೆಯರ ಸಹಾಯಕ್ಕಾಗಿ ಮಹಿಳಾ ಸಾಂತ್ವನ ಸಹಾಯವಾಣಿ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರ ಮತ್ತು ಅನುದಾನದ ಅಡಿಯಲ್ಲಿ ಓಡಿಪಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ನೊಂದ ಮಹಿಳೆಯರಿಗೆ ಸರಕಾರದಿಂದ ಸಿಗುವ ಸೇವೆ ಸವಲತ್ತುಗಳನ್ನು ಒದಗಿಸಿಕೊಡಲಾಗುತ್ತದೆ ಎಂದರು. ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ನೊಂದ ಮಹಿಳೆಯರ ಬಗ್ಗೆ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ೧೦೯೧ ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಸಭೆಯಲ್ಲಿ ನಿಡ್ತ ಗ್ರಾ. ಪಂ. ಅಧ್ಯಕ್ಷೆ ಯಶೋಧ ಪುಟ್ಟಸ್ವಾಮಿ, ಪಿಡಿಒ ನಂದೀಶ್, ನಿಡ್ತ ಗ್ರಾ.ಪಂ. ಮಟ್ಟದ ಸಂಜೀವಿನಿ ಸಮಿತಿ ಅಧ್ಯಕ್ಷೆ ಲಲಿತ ಶಾಂತಪ್ಪ, ಸಂಜೀವಿನಿ ಆಲೂರುಸಿದ್ದಾಪುರ ಗ್ರಾ.ಪಂ. ಮಟ್ಟದ ಅಧ್ಯಕ್ಷೆ ಜಾನಕಿ ಗಂಗಾಧರ್, ಸಂಜೀವಿನಿ ಒಕ್ಕೂಟದ ಸ್ತಿçÃಶಕ್ತಿ ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿ ಪ್ರತಿಭಾ ಮತ್ತು ಒಕ್ಕೂಟದ ಸದಸ್ಯರು ಹಾಜರಿದ್ದರು.