ಸಿದ್ದಾಪುರ, ಡಿ. ೨೩: ಮೇಯಲು ಬಿಟ್ಟಿದ್ದ ಎರಡು ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ ಬಲಿ ತೆಗೆದುಕೊಂಡ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಕರಡಿಗೋಡು ಗ್ರಾಮದ ಮಿತ್ತೂರು ರಾಘವಯ್ಯ ಎಂಬವರಿಗೆ ಸೇರಿದ ೨ ಹಸುಗಳನ್ನು ಬುಧವಾರದಂದು ಮೇಯಲು ಬಿಟ್ಟಿದ್ದರು.
ಈ ಸಂದರ್ಭದಲ್ಲಿ ಕರಡಿಗೋಡಿನ ಟೀಕ್‌ವುಡ್ ಕಾಫಿ ತೋಟದ ಸಮೀಪ ರಾತ್ರಿ ಸಮಯದಲ್ಲಿ ಹುಲಿ ದಾಳಿ ನಡೆಸಿ ಎರಡು ಜಾನುವಾರುಗಳನ್ನು ಕೊಂದು ಅದರ ಹಿಂಭಾಗದ ಮಾಂಸವನ್ನು ಕಿತ್ತು ತಿಂದಿದೆ. ಕರಡಿಗೋಡು ಗ್ರಾಮಸ್ಥರು ಹುಲಿ ದಾಳಿಯಿಂದಾಗಿ ಭಯಭೀತರಾಗಿದ್ದಾರೆ. ಕಾರ್ಮಿಕರು ಕೂಡ ಆತಂಕಕ್ಕೆ ಸಿಲುಕಿದ್ದಾರೆ. ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಸಿದ್ದಾಪುರ ಕರಡಿಗೋಡು ಭಾಗದಲ್ಲಿ ಇದೀಗ ಹುಲಿಯು ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಘಟನೆಯಿಂದಾಗಿ ಕಾರ್ಮಿಕರಿಗೆ ಕಾಫಿ ಕೊಯ್ಲು ಕೆಲಸಕ್ಕೆ ತೆರಳಲು ಕೂಡಾ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರದಂದು ರಾತ್ರಿ ಹುಲಿ ದಾಳಿಗೆ ಸಿಲುಕಿ ಜಾನುವಾರುಗಳು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಗುರುವಾರದಂದು ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುವ ಕಾರ್ಮಿಕರು ಮೃತಪಟ್ಟ ಜಾನುವಾರುಗಳನ್ನು ಕಂಡು ಸ್ಥಳೀಯ ತೋಟದ ಉಸ್ತುವಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ತೋಟದ ವ್ಯವಸ್ಥಾಪಕರು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಇಲಾಖೆಯ ಎ.ಸಿ.ಎಫ್ ರೋಶ್ನಿ, ವಲಯ ಅರಣ್ಯಾಧಿಕಾರಿ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಹೆಚ್ಚಿನ ಪರಿಹಾರಕ್ಕೆ ಆಗ್ರಹ: ಕರಡಿಗೋಡು ಗ್ರಾಮದಲ್ಲಿ ವನ್ಯ ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾನೂನು ಸಲಹೆಗಾರ ಕೆ.ಬಿ ಹೇಮಚಂದ್ರ ಒತ್ತಾಯಿಸಿದ್ದಾರೆ. ಅಲ್ಲದೇ ಹುಲಿ ದಾಳಿಯಿಂದಾಗಿ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಇತ್ತೀಚೆಗೆ ರಾಜ್ಯ ಅರಣ್ಯ ಸಚಿವರಾದ ಆನಂದ್ ಸಿಂಗ್ ರವರು ಘೋಷಣೆ ಮಾಡಿರುವ ಪರಿಹಾರದ ಮೊತ್ತವನ್ನು ಅರಣ್ಯ ಇಲಾಖಾ ಅಧಿಕಾರಿಗಳು ಕೂಡಲೇ ನೀಡಬೇಕೆಂದು ಒತ್ತಾಯಿಸಿದ್ದಾರೆ.
-ವರದಿ: ವಾಸು ಎ.ಎನ್