ಮಡಿಕೇರಿ, ಡಿ. ೨೩: ಅರ್ಧಕ್ಕೆ ನಿಂತ ಕಾಮಗಾರಿ, ರಸ್ತೆಯ ಇಕ್ಕೆಲ್ಲಗಳಲ್ಲಿ ಮಣ್ಣಿನ ರಾಶಿ, ವಾಹನ ಸವಾರರಿಗೆ ಕಿರಿಕಿರಿ, ಜನರ ಓಡಾಟಕ್ಕೂ ಅಡಚಣೆ, ಧೂಳಿನ ನಡುವೆ ನರಕಯಾತನೆ.
ಹೌದು... ಇವೆಲ್ಲ ಸಮಸ್ಯೆಗಳ ನಡುವೆ ಬದುಕುವ ಸ್ಥಿತಿ ಇದೀಗ ಮಡಿಕೇರಿ ನಗರದ ಹೃದಯಭಾಗದಲ್ಲಿರುವ ಗಣಪತಿ ಬೀದಿ ನಿವಾಸಿಗಳಿಗೆ ಸೃಷ್ಟಿಯಾಗಿದೆ. ರಸ್ತೆ ಅಗಲೀಕರಣ ಕಾರ್ಯ ಕೆಲವು ದಿನಗಳಿಂದ ಏಕಾಏಕಿ ಸ್ಥಗಿತಗೊಂಡಿರುವ ಪರಿಣಾಮ ಜನತೆ ಪರಿತಪಿಸುವಂತಾಗಿದೆ. ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜನ ಅಸಮಾಧಾನಗೊಂಡಿದ್ದಾರೆ. ಕೇವಲ ಅಲ್ಲಿನ ನಿವಾಸಿಗಳಲ್ಲದೆ, ಆ ರಸ್ತೆ ಮೂಲಕ ಸಂಚರಿಸುವವರು ಪರದಾಡುವ ದೃಶ್ಯಗಳು ಕಂಡುಬರುತ್ತಿವೆ.
ಅತ್ಯಂತ ಇಕ್ಕಟ್ಟಾಗಿದ್ದ ಗಣಪತಿ ಬೀದಿ ರಸ್ತೆಯ ಅಗಲೀಕರಣ ಮತ್ತು ಹೊಸ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಕಳೆದ ನವೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ರೂ. ೧.೫೦ ಕೋಟಿ ವೆಚ್ಚದ ಉದ್ದೇಶಿತ ಕಾಮಗಾರಿ ಒಂದೆರಡು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಇದಕ್ಕೆ ಪೂರಕವಾಗಿ ಗುತ್ತಿಗೆದಾರರು ಕ್ಷಿಪ್ರಗತಿಯಲ್ಲಿ ಕಾಮಗಾರಿಯನ್ನೂ ಆರಂಭಿಸಿದ್ದರು. ಜೆಸಿಬಿ ಮೂಲಕ ಚರಂಡಿ ಮಾಡಿ ಕಾಂಕ್ರಿಟ್ ಅಳವಡಿಸುವ ಕಾರ್ಯವೂ ನಡೆದಿತ್ತು. ಈ ಯೋಜನೆಯಿಂದ ಉಪಯೋಗವಾಗುತ್ತದೆ ಎಂಬ ದೃಷ್ಟಿಯಿಂದ ಜನರು ಕೂಡ ರಸ್ತೆ ವ್ಯಾಪ್ತಿಗೆ ಬಂದಿದ್ದ ಕಟ್ಟಡಗಳ ಭಾಗವನ್ನು ಕೆಡವಿ ನಗರಸಭೆಗೆ ಸಹಕಾರ ನೀಡಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಕಾಮಗಾರಿ ಒಮ್ಮೆಲೆ ಸ್ತಬ್ಧಗೊಂಡಿರುವುದು ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಿದೆ.
ಪರಿತಪಿಸುತ್ತಿರುವ ಸಾರ್ವಜನಿಕರು
ಕಾಮಗಾರಿ ಕೆಲವು ದಿನಗಳಿಂದ ಅರ್ಧಕ್ಕೆ
(ಮೊದಲ ಪುಟದಿಂದ) ನಿಂತಿರುವ ಪರಿಣಾಮ ಸಾರ್ವಜನಿಕರು ಪರಿತಪಿಸುವಂತಾಗಿದೆ. ರಸ್ತೆಯ ಅಗಲೀಕರಣ, ನೂತನ ಚರಂಡಿ ನಿರ್ಮಾಣದ ಹಿನ್ನೆಲೆ ರಸ್ತೆಯ ಡಾಂಬರನ್ನು ಸಂಪೂರ್ಣ ಕಿತ್ತು ಹಾಕಲಾಗಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಲ್ಲದೆ, ಚರಂಡಿ ನಿರ್ಮಾಣ ಹಿನ್ನೆಲೆ ಮನೆಯಿಂದ ಹೊರಬರಲು ಅನಾನುಕೂಲ ಸೃಷ್ಟಿಯಾಗಿದೆ.
ರಸ್ತೆ ಸಂಪೂರ್ಣ ಮಣ್ಣಿನಿಂದ ಕೂಡಿದ್ದು, ಧೂಳು ಅಧಿಕವಾಗಿ ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ನುಗ್ಗುತ್ತಿದೆ. ಇದರಿಂದ ಮಕ್ಕಳಿಗೆ, ವೃದ್ಧರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಚರಂಡಿ ನಿರ್ಮಾಣಕ್ಕಾಗಿ ತೋಡಿದ ಮಣ್ಣು ರಸ್ತೆ ಬದಿಯಲ್ಲಿರುವುದರಿಂದ ಸಂಚಾರಕ್ಕೂ ವ್ಯತಿರಿಕ್ತ ಪರಿಣಾಮ ಬೀರಿದೆ. ಚರಂಡಿ ಮತ್ತು ಮನೆಯ ನಡುವೆ ನಿವಾಸಿಗಳು ಮರದ ಹಲಗೆಯನ್ನು ಇಟ್ಟು ಓಡಾಡುತ್ತಿದ್ದು, ಇದರಿಂದ ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ.
ಕಾಮಗಾರಿಗೂ ಮುನ್ನ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಹಾಗೆಯೇ ಬಿಡಲಾಗಿದೆ. ರಸ್ತೆ ಅಗಲೀಕರಣವಾಗುತ್ತಿರುವುದರಿಂದ ಕಂಬಗಳು ಮನೆಗಳ ಮೇಲೆ ಅಥವಾ ರಸ್ತೆ ಬದಿಗೆ ವಾಲುತ್ತಿವೆ. ಕಂಬದ ತಳಪಾಯ ಸಡಿಲವಾಗುತ್ತಿರುವುದರಿಂದ ಕಂಬಗಳು ಧರೆಗುರುಳುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ. ಅದಲ್ಲದೆ, ನೂತನವಾಗಿ ಅಳವಡಿಸಿರುವ ಕಂಬಗಳು ವೈಜ್ಞಾನಿಕವಾಗಿಲ್ಲ. ಒಂದನ್ನು ಮನೆಯ ಮುಂದೆ ಹಾದುಹೋಗಿರುವ ಚರಂಡಿಯ ಹಿಂಬದಿಗೆ ಅಳವಡಿಸಿದರೆ ಮತ್ತೊಂದನ್ನು ರಸ್ತೆಯ ಬದಿಗೆ ಅಳವಡಿಸಲಾಗಿದೆ. ಇದರಿಂದ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹಲಗೆ ಮೇಲೆ ನಡಿಗೆ
ಒಂದೆಡೆ ರಸ್ತೆಯ ಬದಿಯಲ್ಲಿ ನೂತನ ಚರಂಡಿ, ಮತ್ತೊಂದೆಡೆ ರಸ್ತೆ ಅಗಲೀಕರಣವಾಗುತ್ತಿರುವುದರಿಂದ ಮನೆಯಿಂದ ಹೊರದಾಟಲು ನಿವಾಸಿಗಳು ಮರದ ಹಲಗೆಯನ್ನು ಅವಲಂಭಿಸಿದ್ದಾರೆ. ಇದು ಮತ್ತೊಂದು ಅಪಾಯಕ್ಕೆ ದಾರಿಯಾಗಿದೆ.
ಕೆಲದಿನದಲ್ಲಿ ಕಾಮಗಾರಿ ಮುಗಿದು ಹಲಗೆಯ ಮೇಲಿನ ನಡಿಗೆಗೆ ಮುಕ್ತಿ ದೊರಕುತ್ತದೆ ಎಂದು ನಂಬಿದ್ದ ಜನರು ಇದೀಗ ಅದರ ಮೇಲೆಯೇ ಸರ್ಕಸ್ ಮಾಡುವಂತಾಗಿದೆ. ಇತ್ತೀಚಿಗೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಕಾಲುಜಾರಿ ಬಿದ್ದ ಘಟನೆಯೂ ನಡೆದಿದ್ದು, ಅವರು ಇದೀಗ ನಡೆದಾಡಲಾಗದೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗಣಪತಿ ಬೀದಿಯಲ್ಲಿ ಮಸೀದಿ ಇರುವುದರಿಂದ ಮುಂಜಾನೆ ಮಕ್ಕಳು ಕಲಿಕೆಗೆ ಆಗಮಿಸುತ್ತಾರೆ. ದಾಟಲು ಇರುವ ಹಲಗೆಯ ಮೂಲಕವೇ ನಡೆದಾಡುತ್ತಾರೆ. ಇದರಿಂದ ಏನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ.? ಎಂದು ಸಾರ್ವಜನಿಕರು ‘ಶಕ್ತಿ’ ಮೂಲಕ ಪ್ರಶ್ನಿಸಿದ್ದಾರೆ.
ಇದರೊಂದಿಗೆ ಮನೆಗಳ ಹಾಗೂ ವಾಣಿಜ್ಯ ಮಳಿಗೆಗಳಿಂದ ಹರಿಯುವ ತ್ಯಾಜ್ಯದ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ನಿಂತಿದೆ. ಇದರಿಂದ ನೂತನ ಚರಂಡಿ ಹಾಳಾಗುವ ಸಾಧ್ಯತೆ ಇದೆ. ನೂತನ ಚರಂಡಿ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ನಡುವೆ ತ್ಯಾಜ್ಯ ಅದೇ ಚರಂಡಿ ಮೂಲಕ ಹೋಗುತ್ತಿರುವುದು ಮತ್ತೊಂದು ಸಮಸ್ಯೆಗೆ ಎಡೆಮಾಡಿಕೊಟ್ಟಿದೆ.
ವೈಜ್ಞಾನಿಕವಾಗಿ ಚಿಂತಿಸಿ ಕಾಮಗಾರಿ ಪ್ರಾರಂಭಿಸಬೇಕು; ಈ ಕೆಲಸ ನಗರಸಭೆ ಮಾಡಿಲ್ಲ ಎಂದು ಸ್ಥಳೀಯ ನಿವಾಸಿ ಖಾನಂ ಸುಲೆಮಾನ್ ಹೇಳುತ್ತಾರೆ. ನಿರ್ಮಾಣಗೊಳ್ಳುತ್ತಿರುವ ಚರಂಡಿ ತಿರುವಿನಿಂದ ಕೂಡಿದೆ. ಈ ಅಂಕುಡೊAಕು ಚರಂಡಿ ಕೆಲಸವೂ ಸರಿಯಾಗಿ ನಡೆದಿಲ್ಲ. ಕಾಂಕ್ರಿಟ್ ಸಮರ್ಪಕವಾಗಿ ಹಾಕಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.
ಜನಪ್ರತಿನಿಧಿಗಳ ನಿರ್ಲಕ್ಷö್ಯ
ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳು ಇಚ್ಚಾಶಕ್ತಿ ಮರೆತಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಸಮಸ್ಯೆ ಇದ್ದರೂ, ಸದಸ್ಯರುಗಳು ಏನೂ ತಿಳಿಯದ ರೀತಿ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಗಣಪತಿ ಬೀದಿ ಅಗಲೀಕರಣವಾಗುತ್ತಿರುವ ಪ್ರದೇಶ ಸದಸ್ಯರುಗಳಾದ ನೀಮಾ ಹರ್ಷದ್ ಹಾಗೂ ಬಷೀರ್ ಅವರುಗಳ ವ್ಯಾಪ್ತಿಗೆ ಬರುತ್ತದೆ. ಜನರ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಮತಪಡೆದು ಆಯ್ಕೆಯಾದ ಇವರುಗಳು ಇದೀಗ ಜನರ ಬವಣೆಗೆ ಮನ್ನಣೆ ನೀಡುತ್ತಿಲ್ಲ ಎಂದು ಮತದಾರರು ನೊಂದಿದ್ದಾರೆ.
-ವಿಶೇಷ ವರದಿ: ಹೆಚ್.ಜೆ. ರಾಕೇಶ್