ಮಡಿಕೇರಿ, ಡಿ. ೨೪: ಮರಗೋಡು ಗ್ರಾಮ ಪಂಚಾಯತಿಯಲ್ಲಿ ಮಾಹಿತಿ ಕಣಜ ವಿಶೇಷ ಗ್ರಾಮ ಸಭೆಯಲ್ಲಿ ನರೇಗಾ ರೋಜ್‌ಗಾರ್ ದಿವಸ ಹಾಗೂ ಎನ್.ಆರ್.ಎಲ್.ಎಮ್ ವತಿಯಿಂದ ಮಿಷನ್ ಅಂತ್ಯೋದಯ ಕಾರ್ಯಕ್ರಮ ನಡೆಯಿತು.
ಮರಗೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಜನಾ ಮೂರ್ತಿ ಮಾತನಾಡಿ ಮಾಹಿತಿ ಕಣಜ ಆಡಳಿತದ ನೂತನ ಪ್ರಯೋಗವಾಗಿದ್ದು , ಅಳವಡಿಸಿರುವ ಎರಡನೆ ರಾಜ್ಯ ಕರ್ನಾಟಕವಾಗಿದೆ.ಮಾಹಿತಿ ಪಡೆಯಲು ಸಾರ್ವಜನಿಕರು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸುತ್ತಾರೆ. ಮಾಹಿತಿ ಕಣಜದಲ್ಲಿ ಆರ್‌ಟಿಐ ಅರ್ಜಿ ಸಲ್ಲಿಸದೆಯೇ ೧೫೭ ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.ಯಾವುದೆ ಲಾಗಿನ್ ವ್ಯವಸ್ಥೆಯಿಲ್ಲದೆ, ಅಂತರ್ಜಾಲದ ಮೂಲಕ ಮಾಹಿತಿ ಕಣಜ ಎಂದು ಛಾಪಿಸಿದರೆ ಪೋರ್ಟಲ್ ಪೇಜ್ ತೆರೆದುಕೊಳ್ಳುತ್ತದೆ. ಶಿಕ್ಷಣ,ಬೆಸ್ಕಾಂ ಮೆಟ್ರೋ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ೬೦ ಇಲಾಖೆಗಳನ್ನು ಹೊಂದಿದ್ದು ೧೬೦ ಸೇವೆಗಳನ್ನು ನಾಗರಿಕರು ಪಡೆದುಕೊಳ್ಳಬಹುದಾಗಿದೆ.
ಹಾಗೂ ಇದೇ ಸಂದರ್ಭದಲ್ಲಿ ಮರಗೋಡು ಗ್ರಾಮ ಪಂಚಾಯತಿ ಅಮೃತ ಗ್ರಾಮ ಪಂಚಾಯತಿಯಾಗಿ ಆಯ್ಕೆಯಾಗಿದ್ದು , ಈ ಯೋಜನೆಗೆ ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳ, ಶೇ ೧೦೦ರಷ್ಟು , ಘನ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು, ಪಂಚಾಯಿತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಉದ್ಯಾನವನಗಳ ನಿರ್ಮಾಣ, ಗ್ರಂಥಾಲಯಗಳ ಡಿಜಿಟಲಿಕರಣ, ಶಾಲೆ, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯಗಳಿಗೆ ಸೌಲಭ್ಯ ಕಲ್ಪಿಸುವುದು, ಆಟದ ಮೈದಾನ, ಆವರಣ ಗೋಡೆಗಳ ನಿರ್ಮಾಣ, ರೈತರ ಕೃಷಿ ಉಪಯೋಗಕ್ಕೆ ಗೋದಾಮು ನಿರ್ಮಾಣ, ಕೆರೆ, ಕಲ್ಯಾಣಿಗಳ ಪುನಶ್ಚೇತನ ಮಾಡುವುದಾಗಿದೆ. ಗ್ರಾಮ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತಿ ಅವಶ್ಯಕ .ಅಲ್ಲದೆ ಮಹಿಳೆಯರು ನರೇಗಾದಲ್ಲಿ ಬರುವ ವೈಯುಕ್ತಿಕ ಪ್ರಯೋಜನವನ್ನು ಹೆಚ್ಚು ಬಳಸಿಕೊಂಡು ಆರ್ಥಿಕವಾಗಿ ಸಧೃಡರಾಗಬೇಕು ಎಂದು ಕರೆ ನೀಡಿದರು.
ರೋಜ್ ಗಾರ್ ದಿವಸ ಪ್ರಯುಕ್ತ ಮಾತನಾಡಿದ ತಾಲೂಕು ಐ.ಇ.ಸಿ ಸಂಯೋಜಕಿ ಅಕ್ಷಿತ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವೈಯಕ್ತಿಕ ಸೌಲಭ್ಯವನ್ನು ಪಡೆದುಕೊಳ್ಳಿ ಹಾಗೂ ಅಮೃತ ಗ್ರಾಮ ಪಂಚಾಯತಿಯ ಅಂಗವಾಗಿ ಪ್ರತಿಯೊಬ್ಬರು ಬಚ್ಚಲು ಗುಂಡಿ ಮಾಡಿಸಿಕೊಳ್ಳಿ ಎಂದು ಹೇಳಿದರು.
ಎಸ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿ ನಳಿನಿ ಕುಮಾರಿ ಸಂಪನ್ಮೂಲ ಮೈಸೂರು ಅವರು, ಮಿಷನ್ ಅಂತ್ಯೋದಯದ ಮುಖ್ಯ ಉದ್ದೇಶ ಬಡತನ ನಿವಾರಣೆಯಾಗಿದೆ. ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಮುನ್ನಡೆಯಬೇಕು ಈ ನಿಟ್ಟಿನಲ್ಲಿ ಸರಕಾರದ ಪ್ರಯೋಜನವನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕ ಇಂಜಿನಿಯರ್ ಭಾರತಿ, ಕೆ.ಎಮ್. ಧರಣಿ, ಎಲ್.ಸಿ.ಆರ್.ಪಿ. ಗ್ರಾ.ಪಂ. ಉಪಾಧ್ಯಕ್ಷೆ ಚಿತ್ರ ಹಾಜರಿದ್ದರು.