ಮಡಿಕೇರಿ, ಡಿ. ೨೪: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿAದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಶ್ಯಾಂ ಪ್ರಸಾದ್ ಮಾತನಾಡಿ, ದಿನಗೂಲಿ ಹಾಗೂ ಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ಸರ್ಕಾರ ಖಾಯಂಗೊಳಿಸಿದೆ. ಆದರೆ, ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ವಿಷಯದಲ್ಲಿ ಮಾತ್ರ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ ಜೀವನ ನಿರ್ವಹಣೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ನಂಜುAಡ ಸ್ವಾಮಿ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಖಜಾಂಚಿ ಪೂರ್ಣಿಮಾ, ಕಾನೂನು ಸಲಹೆಗಾರ ಮನೋಜ್ ಬೋಪಯ್ಯ, ಕಾರ್ಯದರ್ಶಿ ಸರಿತಾ, ಸಹಕಾರ್ಯದರ್ಶಿ ಹರ್ಷಿತ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.