ಕಣಿವೆ, ಡಿ. ೨೩ : ಜನಸಂಖ್ಯಾ ಸ್ಪೋಟದೊಂದಿಗೆ ದಿನೇ ದಿನೇ ಬೆಳೆಯುತ್ತಲೇ ಇರುವ ಕೊಡಗು ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ವಾಸಿಗಳಿಗೆ ಸ್ಥಳೀಯ ಜಲಮಂಡಳಿ ವಿತರಿಸುತ್ತಿರುವ ಕುಡಿಯುವ ನೀರಿನ ಪೈಪುಗಳು ತುಕ್ಕು ಹಿಡಿಯುತ್ತಿವೆ. ಹಾಗಾಗಿ ಜಲಮಂಡಳಿ ಶುದ್ಧವಾಗಿ ಹರಿವ ಸ್ವಾಭಾವಿಕವಾದ ಕಾವೇರಿ ನದಿಯ ನೀರನ್ನು ಮೇಲೆತ್ತಿ ಅದನ್ನು ತಾನೊಂದಿಷ್ಟು ಸಂಸ್ಕರಿಸಿ ಪೈಪುಗಳಲ್ಲಿ ಮನೆ ಮನೆಗಳಿಗೆ ಹರಿಸಿದರೂ ಕೂಡ, ಆ ನೀರು ಮೂಲ ಸತ್ವವನ್ನು ಕಳೆದುಕೊಂಡೇ ಮನೆಗಳಿಗೆ ಸೇರುತ್ತಿದೆ.

ಅಂದರೆ ಕಳೆದ ೪೦ ವರ್ಷಗಳ ಹಿಂದೆ ೧೯೮೧ರಲ್ಲಿ ಕುಶಾಲನಗರ ಪಟ್ಟಣಕ್ಕೆ ಯೋಜಿಸಿದ ಕುಡಿಯುವ ನೀರಿನ ಯೋಜನೆ ಇದೀಗ ಗುಣಮಟ್ಟ ಕಳೆದುಕೊಂಡಿದೆ.

ಅAದರೆ ಸರಾಸರಿ ೧೫ ವರ್ಷಗಳ ಅವಧಿಗೆ ಅಂದಾಜಿಸಿ ಭೂಮಿಯೊಳಗೆ ಹೂತು ನೀರನ್ನು ಪೂರೈಸುವ ಪೈಪುಗಳು ಹಾಗೂ ಪಂಪುಗಳು ದಿನೇ ದಿನೇ ಶಿಥಿಲಗೊಳ್ಳುತ್ತಿದ್ದು, ಅದರೊಳಗೆ ಹರಿವ ಜೀವ ಜಲವೂ ಕೂಡ ಸತ್ವ ಕಳೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ.

ಅಂದರೆ ಈಗಾಗಲೇ ನಿರೀಕ್ಷೆ ಮೀರಿದ ಜನಸಂಖ್ಯಾ ಬಾಹುಳ್ಯವನ್ನು ಹೊಂದಿರುವ ಹಾಗೂ ದಿನೇ ದಿನೇ ಬೆಳೆಯುತ್ತಲೇ ಇರುವ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರನ್ನು ಪೂರೈಸಲು ಜಲಮಂಡಳಿ ಹೆಣಗಾಡುತ್ತಿದೆ.

ಆಗಿಂದಾಗ್ಗೆ ಒಡೆದು ಹೋಗುವ ಪೈಪುಗಳು

ತಮ್ಮ ಆಯುಷ್ಯವನ್ನು ಕಳೆದುಕೊಂಡು ಸತ್ವರಹಿತವಾಗಿರುವ ಪೈಪುಗಳ ಜಾಲ ಇಡೀ ಕುಶಾಲನಗರ ಪಟ್ಟಣ ಹಾಗೂ ನೆರೆಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೂ ವಿಸ್ತರಿಸಿದ್ದು, ಆಗಿಂದಾಗ್ಗೆ ಒಡೆದು ಹಾನಿಯಾಗುತ್ತಿರುವ ಪೈಪುಗಳನ್ನು ಮತ್ತೆ ಮತ್ತೆ ಜೋಡಿಸಿ ಸರಿಮಾಡಿ ನಿವಾಸಿಗಳ ಮನೆಗಳಿಗೆ ನೀರು ಹರಿಸುವುದೇ ಜಲಮಂಡಳಿ ಸಿಬ್ಬಂದಿಗಳಿಗೆ ದೊಡ್ಡ ಸಾಹಸದ ಕೆಲಸವಾಗುತ್ತಿದೆ.

(ಮೊದಲ ಪುಟದಿಂದ)

ಬೇಸಿಗೆಯಲ್ಲಿ ತಪ್ಪದ ಹಾಹಾಕಾರ

ಪ್ರತೀ ಬೇಸಿಗೆಯ ದಿನಗಳಲ್ಲಿ ಕುಶಾಲನಗರದ ಕಾವೇರಿ ನದಿಯ ನೀರಿನಲ್ಲಿ ಇಳಿಕೆ ಕಂಡುಬರುವ ಕಾರಣ ಜನತೆಗೆ ಕುಡಿಯುವ ನೀರು ಪೂರೈಸಲು ಜಲಮಂಡಳಿ ಅದೆಷ್ಟು ಕಷ್ಟಪಡುತ್ತದೆ ಎಂಬುದು ನೋಡುಗರಿಗಷ್ಟೆ ಅರಿವಾಗುತ್ತದೆ. ಅಂದರೆ ಕಾವೇರಿ ನದಿಯ ಜಾಕ್‌ವೆಲ್ ಬಳಿಯ ನದಿಯೊಳಗೆ ಪ್ರತೀ ವರ್ಷವೂ ಮರಳು ಚೀಲಗಳಿಂದ ಚೆಕ್‌ಡ್ಯಾಂ ಮಾದರಿಯಲ್ಲಿ ಹರಿವ ನೀರನ್ನು ತಡೆಹಿಡಿದು ನೀರನ್ನು ಮೇಲೆತ್ತಿ ಪೂರೈಸಲಾಗುತ್ತಿದೆ. ಆದರೆ ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಕೂಡ ಕೈಕೊಡುವ ಕಾರಣದಿಂದ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಕೆಲವೊಂದು ಬಾರಿ ಪಟ್ಟಣದ ಕೆಲವೊಂದು ಬಡಾವಣೆಗಳಿಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ನೀರು ಪೂರೈಸಲಾಗುತ್ತದೆ. ಕಳೆದ ಮೂರು ವರ್ಷಗಳ ಹಿಂದೆ ಉಕ್ಕೇರಿ ಹರಿದ ನದಿಯಲ್ಲಿ ನೀರು ಸಂಪೂರ್ಣ ಸ್ಥಗಿತಗೊಂಡಾಗ ಪಟ್ಟಣ ಪಂಚಾಯಿತಿ ಹಾಗೂ ಮುಳ್ಳುಸೋಗೆ ಗ್ರಾ.ಪಂ. ವತಿಯಿಂದ ಟ್ಯಾಂಕರ್‌ಗಳಲ್ಲಿ ನೀರನ್ನು ಪೂರೈಕೆ ಮಾಡಲಾಗಿತ್ತು.

ಆದರೆ, ಬೆಳೆಯುತ್ತಿರುವ ಕುಶಾಲನಗರದ ನಾಗರಿಕರಿಗೆ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಲಮಂಡಳಿ ಕಳೆದ ನಾಲ್ಕು ವರ್ಷಗಳ ಹಿಂದೆ ಹಾರಂಗಿ ಜಲಾಶಯದಿಂದ ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರೊದಗಿಸಲು ೮೦ ಕೋಟಿ ರೂ.ಗಳ ಕ್ರಿಯಾಯೋಜನೆ ಸಿದ್ದಪಡಿಸಿದ್ದರು. ಆದರೆ ಚುನಾಯಿತ ಜನಪ್ರತಿನಿಧಿಗಳ ನಿರಾಸಕ್ತಿಯಿಂದಾಗಿ ಈ ಯೋಜನೆ ಫಲಪ್ರದವಾಗಲೇ ಇಲ್ಲ.

ಈಗ ೧೨೦ ಕೋಟಿ ರೂಗಳ ನೂತನ ಕ್ರಿಯಾಯೋಜನೆ.....!

ನೆರೆಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಒಂದಿಷ್ಟು ಪ್ರದೇಶವನ್ನು ತನ್ನೊಳಗೆ ಲೀನವಾಗಿಸಿಕೊಂಡು ಪುರಸಭೆಯಾಗುವ ಹೊಸ್ತಿಲಲ್ಲಿರುವ ಕುಶಾಲನಗರಕ್ಕೆ ವ್ಯವಸ್ಥಿತವಾದ ಕುಡಿಯುವ ನೀರು ಪೂರೈಸಲು ಮತ್ತೆ ಎರಡನೇ ಬಾರಿಗೆ ವಿನೂತನ ಕ್ರಿಯಾಯೋಜನೆಯೊಂದನ್ನು ಜಲಮಂಡಳಿ ಸಿದ್ದಪಡಿಸುತ್ತಿದೆ ಎನ್ನಲಾಗಿದೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ೮೦ ಕೋಟಿ ರೂ.ಗಳ ವೆಚ್ಚದಲ್ಲಿ ಸಿದ್ದವಾಗಿದ್ದ ಈ ಯೋಜನೆಯ ವೆಚ್ಚ ಇದೀಗ ೪೦ ಕೋಟಿ ರೂ.ಗಳಿಗೆ ಹೆಚ್ಚುವರಿಯಾಗಿದೆ. ಅಂದರೆ ಒಟ್ಟು ೧೨೦ ಕೋಟಿ ರೂ.ಗಳಿಗೆ ಹೊಸ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ಜಲಮಂಡಳಿ ಮೂಲಗಳಿಂದ ‘ಶಕ್ತಿ'ಗೆ ತಿಳಿದು ಬಂದಿದೆ.

ಆದರೆ ಜಲಮಂಡಳಿ ಅಧಿಕಾರಿಗಳು ಸಿದ್ದಪಡಿಸುವ ಯೋಜನೆಗಳನ್ನು ಸ್ಥಳೀಯ ಪಟ್ಟಣ ಪಂಚಾಯಿತಿಯ ಬಿಜೆಪಿ ಆಡಳಿತ ಮಂಡಳಿ ಪರಾಮರ್ಶಿಸಿ ಪಟ್ಟಣದ ನಾಗರಿಕರ ಹಿತದೃಷ್ಟಿಯಿಂದ ಕ್ಷೇತ್ರದ ಶಾಸಕರ ಗಮನ ಸೆಳೆದು ಸರ್ಕಾರದಿಂದ ಪೂರಕವಾದ ಅನುದಾನವನ್ನು ತರುವಲ್ಲಿ ಮುಂದಾಗಬೇಕಿದೆ. ಏಕೆಂದರೆ ಈಗಲೂ ಈ ಯೋಜನೆ ಬಗ್ಗೆ ನಿರ್ಲಕ್ಷö್ಯ ವಹಿಸಿದಲ್ಲಿ ಇದೇ ಯೋಜನೆ ಮತ್ತೆ ಮುಂದಿನ ಎರಡು ಮೂರು ವರ್ಷಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆ ಇರುವುದರಿಂದ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕಾರ್ಯಸಿದ್ದಿಗೆ ಪ್ರಯತ್ನ ನಡೆಸಬೇಕಿದೆ.

ಕಾವೇರಿಯಷ್ಟೆ ಪವಿತ್ರ ಹಾರಂಗಿ

ಕೊಡಗಿನ ಪಶ್ಚಿಮಘಟ್ಟಗಳ ಸಾಲಿನ ಜಲಮೂಲಗಳಿಂದ ಹುಟ್ಟಿ ಹರಿವ ಕಾವೇರಿ ಹಾಗೂ ಹಾರಂಗಿ ಎರಡೂ ನದಿಗಳು ಪರಮ ಪವಿತ್ರವಾಗಿರುವ ಕಾರಣ ಆ ನದಿಗಳ ನೀರು ಅಷ್ಟೇ ಶ್ರೇಷ್ಠವಾಗಿದೆ. ಆದ್ದರಿಂದ ಆಡಳಿತಾರೂಢರು ಅತೀ ತುರ್ತಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೊಸ ಪೈಪುಗಳ ಅಳವಡಿಕೆ ಅತೀ ಅಗತ್ಯ

ಕುಶಾಲನಗರದಲ್ಲಿ ಕಳೆದ ೪೦ ವರ್ಷಗಳ ಹಿಂದೆ ಕಡಿಮೆ ಜನಸಂಖ್ಯೆ ಇದ್ದಾಗ ನಿರ್ಮಿಸಿದ್ದ ಕುಡಿಯುವ ನೀರು ಸರಬರಾಜು ಪೈಪುಗಳನ್ನೆಲ್ಲಾ ತೆರವುಗೊಳಿಸಿ ಹೊಸ ಪೈಪುಗಳನ್ನು ಅಳವಡಿಸಿ ಕುಡಿಯುವ ನೀರನ್ನು ಪೂರೈಸಬೇಕಿದೆ.

ಇದೀಗ ಕುಶಾಲನಗರ ಪಟ್ಟಣದಲ್ಲಿ ೧೫ ಲಕ್ಷ ಲೀಟರ್ ಸಾಮರ್ಥ್ಯದ ಎರಡು ವಾಟರ್ ಟ್ಯಾಂಕುಗಳಿದ್ದು, ದಿನಂಪ್ರತಿ ೨೮ ಲಕ್ಷ ಲೀಟರ್ ನೀರನ್ನು ಪೂರೈಸಲಾಗುತ್ತಿದೆ.

ಹಾಗೆಯೇ ನದಿ ದಂಡೆಯ ಜಾಕ್‌ವೆಲ್ ಬಳಿ ೬೫ ಹೆಚ್ ಪಿ ಸಾಮರ್ಥ್ಯದ ಎರಡು ಯಂತ್ರಾಗಾರಗಳಿವೆ. ಅವುಗಳ ಪೈಕಿ ಒಂದು ಯಂತ್ರ ಕಾರ್ಯಾರಂಭ ಮಾಡುತ್ತಿದ್ದು, ಮತ್ತೊಂದು ಯಂತ್ರವನ್ನು ಪರ್ಯಾಯವಾಗಿ ಮೀಸಲಿಟ್ಟುಕೊಳ್ಳಲಾಗಿದೆ.

ಮುಳ್ಳುಸೋಗೆಯ ಕುವೆಂಪು ಬಡಾವಣೆ ಹಾಗೂ ಗುಮ್ಮನಕೊಲ್ಲಿ ಗುಡ್ಡದ ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ೨೮ ರಿಂದ ೩೦ ಲಕ್ಷ ಜನಸಂಖ್ಯೆಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಹಾರಂಗಿ ಜಲಾಶಯದಿಂದ ಕುಡಿಯುವ ನೀರಿನ ನೂತನ ಯೋಜನೆ ಫಲಪ್ರದವಾದಲ್ಲಿ ಕುಶಾಲನಗರ ಪಟ್ಟಣ ಹಾಗೂ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಜನವಸತಿ ಪ್ರದೇಶಗಳಿಗೆ ಸುವ್ಯವಸ್ಥಿತವಾದ ಕುಡಿಯುವ ನೀರನ್ನು ಪೂರೈಸಬಹುದಾಗಿದೆ. (ವಿಶೇಷ ವರದಿ : ಕೆ.ಎಸ್.ಮೂರ್ತಿ)