ಮಡಿಕೇರಿ, ಡಿ. ೨೪: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ, ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಬಾಹ್ಯ ಸೇವಾ ಕೇಂದ್ರದ ವತಿಯಿಂದ ಉಚಿತ ಶ್ರವಣ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ಜಿಲ್ಲಾ ಶಸ್ತçಚಿಕಿತ್ಸಕರು ಮತ್ತು ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ್, ಸ್ಥಾನೀಯ ವೈದ್ಯಾಧಿಕಾರಿ ಡಾ.ಎನ್.ವಿ.ರೂಪೇಶ್ ಗೋಪಾಲ್, ಕಿವಿ ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥರು ಮತ್ತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಂಯೋಜಕರಾದ ಡಾ. ಶ್ವೇತ ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಉಚಿತವಾಗಿ ಶ್ರವಣ ಯಂತ್ರವನ್ನು ವಿತರಿಸಲಾಯಿತು ಹಾಗೂ ಜನರಿಗೆ ಕಿವಿಯ ರಕ್ಷಣೆ ಹಾಗೂ ಶ್ರವಣಯಂತ್ರದ ಉಪಯೋಗದ ಬಗ್ಗೆ ಮಾಹಿತಿ ನೀಡಲಾಯಿತು.
ಆಸ್ಪತ್ರೆಯಲ್ಲಿ ಕಿವಿಯ ತೊಂದರೆಗಳನ್ನು ಪರಿಶೀಲಿಸಲು ಸುಸಜ್ಜಿತವಾದ ಆಧುನಿಕ ಯಂತ್ರ ಉಪಕರಣಗಳು ಲಭ್ಯವಿದ್ದು, ಕೊಡಗಿನ ಜನತೆ ಈ ಸೌಲಭ್ಯ ಪಡೆದುಕೊಳ್ಳಬಹುದು. ಶ್ರವಣ ಯಂತ್ರದ ಅವಶ್ಯಕತೆ ಇರುವವರು ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಆಸ್ಪತ್ರೆಗೆ ಭೇಟಿಕೊಡುವಾಗ ಜೊತೆಗೆ ತಂದು ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ ತಿಳಿಸಿದರು.