ಶ್ರೀಮಂಗಲ, ಡಿ. ೨೧: ತಾ. ೧೬ರಂದು ಬಿ.ಶೆಟ್ಟಿಗೇರಿಯ ಕುಟ್ಟಂದಿ ಗ್ರಾಮದಲ್ಲಿ ಯುವಕ ನಾಮೇರ ದಿಶನ್ ದೇವಯ್ಯ (೨೨) ಅವರು ವಿದ್ಯುತ್ ತಂತಿ ತಗುಲಿ ದುರ್ಮರಣಕ್ಕೀಡಾಗಿದ್ದು, ಇದಕ್ಕೆ ಸೆಸ್ಕ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ÷್ಯ ಹಾಗೂ ಬೇಜವಾಬ್ದಾರಿತನ ಕಾರಣವಾಗಿದೆ ಎಂಬ ಆರೋಪವನ್ನು ಬಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಕೊಲ್ಲೀರ ಬೋಪಣ್ಣ ಮಾಡಿದ್ದಾರೆ.

ಸಂಬAಧಿಸಿದ ಮಾರ್ಗವನ್ನು ತೋಟ-ಗದ್ದೆಯಿಂದ ರಸ್ತೆ ಬದಿಗೆ ಸ್ಥಳಾಂತರಿಸಲು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇಲಾಖಾಧಿಕಾರಿಗಳು ಸ್ಪಂದಿಸಲಿಲ್ಲ. ಸಾವಿಗೀಡಾದ ಯುವಕನ ಕುಟುಂಬಕ್ಕೆ ಕನಿಷ್ಟ ರೂ. ೫೦ ಲಕ್ಷ ಪರಿಹಾರ ನೀಡಬೇಕು ಹಾಗೂ ಸಹೋದರನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮುಂದೆ ಇಂತಹ ದುರ್ಘಟನೆ ನಡೆಯದಂತೆ ಒಂದು ತಿಂಗಳೊಳಗೆ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಲು ಬೋಪಣ್ಣ ಒತ್ತಾಯಿಸಿದರು.

ಪೊನ್ನಂಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಸ್ಕ್ ಇಲಾಖೆಯ ಅಧಿಕಾರಿಗಳು ಇದಕ್ಕೆ ಸ್ಪಂದಿಸದಿದ್ದರೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸುವುದಾಗಿ ಬೋಪಣ್ಣ ಎಚ್ಚರಿಸಿದರು.

ಬಿ. ಶೆಟ್ಟಿಗೇರಿ ಹಾಗೂ ಕುಟ್ಟಂದಿ ಗ್ರಾಮದಲ್ಲಿ ಹಾದುಹೋಗಿರುವ ೧೧ ಕೆವಿ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಸ್ಥಳಾಂತರಿಸಲು ಎರಡು ವರ್ಷಗಳಿಂದ ನಿರಂತರವಾಗಿ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬಿ. ಶೆಟ್ಟಿಗೇರಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಲಾಗಿ ಸಭೆಯಲ್ಲಿದ್ದ ಸೆಸ್ಕ್ ಕಿರಿಯ ಇಂಜಿನಿಯರ್ ಅವರು ಒಂದು ತಿಂಗಳೊಳಗೆ ಮಾರ್ಗ ಬದಲಾಯಿಸುವ ಭರವಸೆ ನೀಡಿದ್ದರು. ಇದಲ್ಲದೆ ತಾ. ೨೨.೦೨.೨೦೨೧ ರಂದು ಗ್ರಾಮ ಪಂಚಾಯಿತಿಯಿAದ ಲಿಖಿತವಾಗಿ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಗಿತ್ತು.

ಇದೇ ಅಕ್ಟೋಬರ್ ೨೫ರಂದು ಮಡಿಕೇರಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು ಅವರ ಕಚೇರಿಯ ಎದುರು ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭವೂ ಈ ವಿಚಾರ ಪ್ರಸ್ತಾಪ ಮಾಡಿ ತೋಟದಲ್ಲಿ ಕಾಳುಮೆಣಸು ಕುಯ್ಲು, ನೀರಾವರಿ ಕೆಲಸ, ತೋಟದ ಕಾರ್ಯಚಟುವಟಿಕೆ, ಮರ ಕಪಾತು ಇತ್ಯಾದಿ ಸಂದರ್ಭ ಹಳೆಯ, ಶಿಥಿಲಾವಸ್ಥೆಯ ಮತ್ತು ಜೋತುಬಿದ್ದಿರುವ ವಿದ್ಯುತ್ ಮಾರ್ಗದಿಂದ ಕಾರ್ಮಿಕರು ಹಾಗೂ ಬೆಳೆಗಾರರಿಗೆ ಅಪಾಯವಿರುವ ಬಗ್ಗೆ ಗಮನ ಸೆಳೆಯಲಾಗಿತ್ತು. ಈ ಸಂದರ್ಭ ಗರಿಷ್ಠ ಒಂದು ತಿಂಗಳೊಳಗೆ ಮಾರ್ಗ ಸ್ಥಳಾಂತರಿಸುವುದಾಗಿ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ್ ಅವರು ಭರವಸೆ ನೀಡಿದ್ದರು.

ಇದಕ್ಕೂ ಮೊದಲು ಅಭಿಯಂತರರಿಗೆ ಹಲವು ಬಾರಿ ವೀರಾಜಪೇಟೆ ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ ಇದ್ದ ವೀರಾಜಪೇಟೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೂ ಮನವಿ ಸಲ್ಲಿಸಿದ ಸಂದರ್ಭ ಅವರು ಮಾರ್ಗ ಸ್ಥಳಾಂತರಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಿದ್ದರು. ಆದರೆ, ಅವರು ಕೆಲವೇ ಸಮಯದಲ್ಲಿ ವರ್ಗಾವಣೆಗೊಂಡ ನಂತರ ಬಂದ ಅಧಿಕಾರಿ ಮಾರ್ಗವನ್ನು ಬದಲಾಯಿಸುವ ನಿಟ್ಟಿನಲ್ಲಿ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ದೂರಿದರು. ಈ ಸಂದರ್ಭ ಚೇರಂಡ ಮೋಹನ್, ಅನು ಹಾಜರಿದ್ದರು.