*ಗೋಣಿಕೊಪ್ಪ, ಡಿ. ೨೧: ವಿನಿಗರ್, ಜಾಮ್, ಉಪ್ಪಿನಕಾಯಿ, ಸ್ಕಾ÷್ವಷ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಕಿತ್ತಳೆ ಬೆಳೆಗಾರ ಸಹಕಾರ ಸಂಘದ ಕಚೇರಿಯಲ್ಲಿ ಸದಸ್ಯರು ಖರೀದಿಸುವುದರಿಂದ ಸಂಘದ ಉತ್ಪನ್ನ ಮತ್ತು ಮಾರಾಟಕ್ಕೆ ಅನುಕೂಲವಾಗಲಿದೆ ಎಂದು ಗೋಣಿಕೊಪ್ಪ ಕಿತ್ತಳೆ ಬೆಳೆಗಾರ ಸಹಕಾರ ಸಂಘದ ಉಪಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ತಿಳಿಸಿದರು.
ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಉಪಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಸಲಹೆ ನೀಡಲಾಯಿತು.
ಸಂಘದ ಚಟುವಟಿಕೆ ಮತ್ತಷ್ಟು ಸಕ್ರಿಯವಾಗಲು ಸದಸ್ಯರ ಸಹಕಾರ ಬಹುಮುಖ್ಯ. ಸಂಘದಲ್ಲಿ ಉತ್ಪಾದಿಸುವ ವಸ್ತುಗಳನ್ನು ಸದಸ್ಯರು ನೇರವಾಗಿ ಖರೀದಿಸುವುದರ ಜತೆಗೆ ಸ್ಥಳೀಯ ಮಾರುಕಟ್ಟೆಯ ಬಗ್ಗೆ ಜನಾಭಿಪ್ರಾಯ ಮೂಡಿಸಲು ಪ್ರಯತ್ನಿಸಬೇಕೆಂದು ಹೇಳಿದರು.
ಸಂಘವು ಮಡಿಕೇರಿಯ ಐನ್‌ಮನೆ ಹಾಗೂ ಪತ್ತಾಯ ಕೂರ್ಗ್ ಸ್ಟೋರ್ ಎಂಬ ಬ್ರಾಂಡ್‌ನಲ್ಲಿ ಉತ್ಪಾದಿಸುವ ವಿನಿಗರ್, ಜೇನು, ನೆಲ್ಲಿಕಾಯಿ, ಬಿಟರ್ ಆರೆಂಜ್, ಬೈಂಬಳೆ ಉಪ್ಪಿನಕಾಯಿಗಳಿಗೆ ಹೊರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಕೊಡಗಿನಲ್ಲಿಯೂ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಅವಕಾಶ ಸಿಗಲು ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಸದಸ್ಯರ ಸಹಕಾರ ಬಹುಮುಖ್ಯ ಎಂದರು.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಸಿಂಗನ ಅಗ್ರಹಾರ ಎ.ಪಿ.ಎಂ.ಸಿ. ಯಾರ್ಡ್ನ ಮಂಡಿಯಲ್ಲಿ ಹಣ್ಣಿನ ವಹಿವಾಟನ್ನು ಸಂಘವು ನಡೆಸುತ್ತಾ ಬಂದಿದೆ. ಇದರಂತೆ ದೇಶದ ಇನ್ನಿತರ ಮಹಾನಗರಗಳಿಗೆ ಸಂಘದ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಬೆಂಗಳೂರಿನ ಮಾರ್ಕೆಟ್ ಕಂಪೆನಿಯೊAದಿಗೆ ಮಾತುಕತೆ ನಡೆಸಿ ಕಿತ್ತಳೆ ಬೆಳೆಗಾರ ಸಹಕಾರ ಸಂಘದ ಉತ್ಪನ್ನಗಳ ಮಾರುಕಟ್ಟೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸದಸ್ಯರು ತಮ್ಮ ತೋಟದಲ್ಲಿ ಬೆಳೆದ ಕಿತ್ತಳೆ, ಮಾವು, ಹಲಸು, ಪೈನ್ಯಾಪಲ್ ಹಣ್ಣುಗಳನ್ನು ತಂದು ಸಂಘಕ್ಕೆ ಮಾರಾಟ ಮಾಡುವುದರಿಂದ ಸಂಘದ ಸಕ್ರಿಯ ವ್ಯಾಪಾರದ ಚಟುವಟಿಕೆಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರಾದ ಕಡೇಮಾಡ ಸುನೀಲ್‌ಮಾದಪ್ಪ, ಕಿರಿಯಮಾಡ .ಯು. ಪೂಣಚ್ಚ, ಸಣ್ಣುವಂಡ ಎಂ. ವಿಶ್ವನಾಥ್, ಎಸ್.ಎಸ್. ಸುರೇಶ್, ಚೇಂದ್ರಿಮಾಡ ಕಾಳಯ್ಯ, ಚೇಂದAಡ ಸುಮಿ ಸುಬ್ಬಯ್ಯ, ಕಾರ್ಯನಿರ್ವಹಣಾಧಿಕಾರಿ ಹೇಮಂತ್, ಸಿಬ್ಬಂದಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು.