ಮಡಿಕೇರಿ, ಡಿ. ೨೧: ಕರ್ನಾಟಕದಲ್ಲಿದ್ದುಕೊಂಡು ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟç ಏಕೀಕರಣ ಸಮಿತಿಯನ್ನು (ಎಂ.ಇ.ಎಸ್.) ನಿಷೇಧ ಮಾಡಬೇಕೆಂದು ಆಗ್ರಹಿಸಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು, ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಜಮಾವಣೆಗೊಂಡ ಕಾರ್ಯಕರ್ತರುಗಳು ಎಂ.ಇ.ಎಸ್. ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕದಲ್ಲಿದ್ದು ಈ ರೀತಿ ವರ್ತಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಕನ್ನಡಿಗರ ಭಾವನೆಯನ್ನು ಕೆರಳಿಸುತ್ತಿರುವವರಿಗೆ ತಕ್ಕಪಾಠ ಕಲಿಸಬೇಕೆಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್ ಮಾತನಾಡಿ, ಪುಂಡ-ಪೋಕರಿತನ ತೋರುತ್ತಿರುವ ಎಂ.ಇ.ಎಸ್. ಅನ್ನು ನಿಷೇಧಿಸಬೇಕು. ಸರಕಾರ ಈ ನಿಟ್ಟಿನಲ್ಲಿ ಬಿಗಿ ನಿಲುವು ತಾಳಬೇಕು. ಕನ್ನಡಿಗರು ಕಾನೂನು ಕೈಗೆತ್ತುಕೊಳ್ಳುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು. ಬೆಳಗಾವಿಯಲ್ಲಿ ಪದೇ ಪದೇ ಕನ್ನಡಿಗರ ಭಾವನೆಯನ್ನು ಕೆರಳಿಸುವ ಕೆಲಸವಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮರಾಠಿಗರು ಹಾಗೂ ಕನ್ನಡಿಗರು ಸೌಹರ್ದತೆಯಿಂದ ಬಾಳುತ್ತಿದ್ದೇವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿದ್ಯಾಮಾನ ಬೇರೆ ಜಿಲ್ಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕರ್ನಾಟಕದ ನೆಲ, ಜಲ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿರಬೇಕೆAದು ಕರೆ ನೀಡಿದರು.
ಮಡಿಕೇರಿ ತಾಲೂಕು ಅಧ್ಯಕ್ಷ ರವಿಗೌಡ ಮಾತನಾಡಿ, ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ವಿರೂಪ ಮಾಡಿದ್ದಲ್ಲದೆ, ಕನ್ನಡಿಗರ ಅಸ್ಮಿತೆಯಾಗಿರುವ ಕನ್ನಡ ಧ್ವಜವನ್ನು ಸುಟ್ಟು ಎಂ.ಇ.ಎಸ್. ಪುಂಡಾಟ ಮೆರೆದಿದೆ. ಕರ್ನಾಟಕದಲ್ಲಿರಲು ಆಗದಿದ್ದಲ್ಲಿ ನಮ್ಮ ನೆಲವನ್ನು ಬಿಟ್ಟು ಹೋಗಲಿ. ಅದನ್ನು ಬಿಟ್ಟು ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುತ್ತಿರುವುದು ಒಳ್ಳೆ ಬೆಳವಣಿಗೆಯಲ್ಲ. ಈಗಾಗಲೇ ಕನ್ನಡಿಗರ ಶಕ್ತಿ ಬೆಳಗಾವಿಯಲ್ಲಿ ಪ್ರದರ್ಶನವಾಗುತ್ತಿದೆ. ಇದೇ ರೀತಿ ಪುಂಡಾಟ ಮುಂದುವರೆದಲ್ಲಿ ಶಾಂತಿಪ್ರಿಯ ಕನ್ನಡಿಗರು ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕನ್ನಡಿಗರ ಮತ ಪಡೆದ ಬೆಳಗಾವಿಯ ಶಾಸಕರು, ಸಂಸದರುಗಳು ನಾಟಕವಾಡುತ್ತಿದ್ದರೆ. ಮುಂದಿನ ದಿನಗಳಲ್ಲಿ ಜನರು ನಿಮಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಾವ ಮಾಲ್ದಾರೆ, ವೀರಾಜಪೇಟೆ ತಾಲೂಕು ಅಧ್ಯಕ್ಷ ಅನಿಲ್ ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ, ನಗರ ಅಧ್ಯಕ್ಷ ದೇವೋಜಿ, ಮಹಿಳಾ ಘಟಕದ ನಗರ ಅಧ್ಯಕ್ಷೆ ಮಿನಾಜ್ ಪ್ರವೀಣ್, ಪ್ರಮುಖರಾದ ವಿಕ್ರಂ ಜಾದೂಗಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.