ಮಡಿಕೇರಿ, ಡಿ. ೨೧: ಮಹದೇವಪೇಟೆ-ಗಣಪತಿ ಬೀದಿ ಕೂಡು ರಸ್ತೆ ಬಳಿ ನಗರಸಭೆಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಅಂಗಡಿ ನಿರ್ಮಿಸುತ್ತಿದ್ದು ಅದನ್ನು ತೆರವುಗೊಳಿಸುವಂತೆ ಐವರು ನಗರಸಭಾ ಸದಸ್ಯರುಗಳು ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಗರಸಭಾ ಸದಸ್ಯರುಗಳಾದ ಅಮೀನ್ ಮೊಯ್ಸಿನ್, ಮನ್ಸೂರ್ ಅಲಿ, ಬಷಿರ್ ಅಹ್ಮದ್, ನೀಮಾ ಅರ್ಶದ್ ಹಾಗೂ ಮೇರಿ ವೇಗಸ್ ಇವರುಗಳು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದು,

ಈ ಕೂಡು ರಸ್ತೆ ಬದಿಯಲ್ಲಿದ್ದ ಸಾರ್ವಜನಿಕ ಬಳಕೆಯ ನೀರಿನ ಟ್ಯಾಂಕ್‌ನ್ನು ಗಣಪತಿ ಬೀದಿ ರಸ್ತೆ ಅಗಲೀಕರಿಸುವ ಸಂದರ್ಭ ನಗರಸಭೆಯ ವತಿಯಿಂದ ಕೆಡವಿ ಹಾಕಲಾಗಿದೆ. ಅದೇ ರೀತಿ ಪಕ್ಕದಲ್ಲಿದ್ದ ನಗರಸಭೆಯ ಜಾಗದಲ್ಲಿದ್ದಂತಹ ಒಂದು ಚಿಕ್ಕ ಕ್ಯಾಂಟೀನ್ ಅನ್ನು ಕೂಡ ತೆರವುಗೊಳಿಸಲಾಗಿದೆ. ಇದೀಗ ಕೆಡವಿ ಹಾಕಿರುವ ಕ್ಯಾಂಟೀನ್ ಮಳಿಗೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ನಗರಸಭೆಯ ಅನುಮತಿಯಿಲ್ಲದೆ ಅಂಗಡಿ ನಿರ್ಮಿಸುತ್ತಿರುವುದು ಕಂಡುಬAದಿದ್ದು, ಅದನ್ನು ತೆರವುಗೊಳಿಸಿ ಆ ಜಾಗದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಹೊಸದಾಗಿ ನೀರಿನ ಟ್ಯಾಂಕನ್ನು ನಗರಸಭೆಯ ವತಿಯಿಂದ ನಿರ್ಮಿಸುವಂತೆ ಕೋರಿದ್ದಾರೆ.